ಆಸ್ಟ್ರೇಲಿಯಾ: ಸಿಡ್ನಿಯ ಜನಪ್ರಿಯ ಪ್ರವಾಸಿ ತಾಣ ಬಂಡಿ ಬೀಚ್‌ನಲ್ಲಿ ಇಬ್ಬರು ಬಂದೂಕುಧಾರಿಗಳು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಭಾನುವಾರ ಸಂಜೆ 6.30 (ಸ್ಥಳೀಯ ಕಾಲಮಾನ)ರ ಸುಮಾರಿಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಜನರು ಬೀಚ್‌ನಲ್ಲಿ ಆನಂದಿಸುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಬಂದೂಕುಧಾರಿಗಳು ಪ್ರವೇಶಿಸಿದ್ದಾರೆ. ನಂತರ ಮನಸೋಇಚ್ಛೆ ಗುಂಡು ಹಾರಿಸಲು ಶುರು ಮಾಡಿದ್ದಾರೆ. ನೂರಾರು ಪ್ರವಾಸಿಗರು ತಮ್ಮ ಜೀವ ಉಳಿಸಿಕೊಳ್ಳಲು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಪ್ಪು ಮುಖವಾಡ ಧರಿಸಿದ ಇಬ್ಬರು ಶಾಟ್‌ಗನ್‌ಗಳೊಂದಿಗೆ ಸರ್ಫ್ ಕ್ಲಬ್‌ನ ಪಕ್ಕದ ಪಾದಚಾರಿ ಸೇತುವೆಯ ಬಳಿ ಬಂದು ಗುಂಡು ಹಾರಿಸಿದ್ದಾರೆ. ಮುಖ್ಯವಾಗಿ, ಅಲ್ಲಿ ನಡೆಯುತ್ತಿದ್ದ ಯಹೂದಿಗಳ ಕಾರ್ಯಕ್ರಮವನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ. ಭೀಕರ ದಾಳಿಯಲ್ಲಿ ಕನಿಷ್ಟ 10 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯಾದ ಪತ್ರಿಕೆಗಳು ವರದಿ ಮಾಡಿವೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಭದ್ರತಾ ಪಡೆಗಳು ತಕ್ಷಣವೇ ದಾಳಿಕೋರರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದಾಳಿಯಲ್ಲಿ ಗಾಯಗೊಂಡವರನ್ನು ರಕ್ಷಿಸಲು ಹೆಲಿಕಾಪ್ಟರ್‌ಗಳು ಮತ್ತು 30 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು.
ಯಹೂದಿಗಳು ಟಾರ್ಗೆಟ್: ಬೊಂಡಿ ಬೀಚ್‌ನಲ್ಲಿ ನಡೆಯುತ್ತಿದ್ದ ಯಹೂದಿ ಆಚರಣೆಗಳನ್ನು ದಾಳಿಕೋರರು ಗುರಿಯಾಗಿಸಿಕೊಂಡಿರುವ ಶಂಕೆ ಇದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಯಹೂದಿಗಳು ಭಾಗವಹಿಸಿದ್ದರು ಎಂಬ ಮಾಹಿತಿ ದೊರೆತಿದೆ.
ವೈರಲ್ ವಿಡಿಯೋಗಳು: ಬೀಚ್‌ಗೆ ನುಗ್ಗಿದ ದಾಳಿಕೋರರನ್ನು ಸ್ಥಳೀಯರೊಬ್ಬರು ಹಿಂದಿನಿಂದ ಬಿಗಿಯಾಗಿ ಹಿಡಿದು ಆತನ ಕೈಯಿಂದ ಬಂದೂಕು ಕಸಿದುಕೊಂಡು ಓಡಿಸಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ಮತ್ತೊಬ್ಬ ಬಂದೂಕುಧಾರಿಯೂ ಹಿಂದೆ ಸರಿದಿದ್ದಾನೆ. ಇದರ ವಿಡಿಯೋಗಳು ವೈರಲ್ ಆಗಿವೆ.
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ನ್ಯೂ ಸೌತ್ ವೇಲ್ಸ್ ಪ್ರೀಮಿಯರ್, ಆಸ್ಟ್ರೇಲಿಯಾದ ಫೆಡರಲ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿರುವುದಾಗಿ ಅವರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post