ಉಳ್ಳಾಲ : ಇಲ್ಲಿನ ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರ ಮನೆಗೆ ರೂ.7.71 ಲಕ್ಷ ಮೊತ್ತದ ವಿದ್ಯುತ್ ಬಿಲ್ ನೀಡಲಾಗಿತ್ತು. ಮೀಟರ್ ರೀಡರ್ ಮಾಡಿದ ತಪ್ಪು ಗಮನಕ್ಕೆ ಬರುತ್ತಿದ್ದಂತೆಯೇ ಮೆಸ್ಕಾಂ ಅಧಿಕಾರಿಗಳು ತಪ್ಪನ್ನು ಸರಿಪಡಿಸಿ, ರೂ. 2,833 ಮೊತ್ತದ ಪರಿಷ್ಕೃತ ಬಿಲ್ಲು ನೀಡಿದ್ದಾರೆ.
ಮನೆಗೆ ಬಂದ ಮೀಟರ್ ರೀಡರ್ ಬಿಲ್ಲು ನೀಡಿದರು. ಅದರಲ್ಲಿ 99,338 ಯುನಿಟ್ ಖರ್ಚಾಗಿದ್ದು, ಬಿಲ್ಲು ಮೊತ್ತ ರೂ.7,71,07 ಎಂದು ನಮೂದಿಸಲಾಗಿತ್ತು. ‘ನಮಗೆ ತಿಂಗಳಿಗೆ ಸರಾಸರಿ ಮೂರು ಸಾವಿರ ಬಿಲ್ಲು ಬರುತ್ತಿತ್ತು. ನಾವು ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಲ್ಲು ಪಾವತಿಸಿದ್ದೇವೆ. ಈಗ ಇಷ್ಟೊಂದು ಬಿಲ್ಲು ಬರಲು ಹೇಗೆ ಸಾಧ್ಯ ಎಂದು ಮೀಟರ್ ರೀಡರ್ ಅವರನ್ನು ಪ್ರಶ್ನಿಸಿದೆವು. ನನಗೆ ಗೊತ್ತಿಲ್ಲ. ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ಎಂದು ಅವರು ಹೇಳಿ ಹೋದರು’ ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ತಿಳಿಸಿದರು.


ಈ ಪ್ರಮಾದ ತಿಳಿದ ಮೆಸ್ಕಾಂ ಅಧಿಕಾರಿಗಳು, ಪರಿಷ್ಕೃತ ಬಿಲ್ಲನ್ನು ಸದಾಶಿವ ಆಚಾರ್ಯ ಅವರ ಮನೆಗೆ ತಲುಪಿಸಿದರು. ‘ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್ ಮಾಡಿಸಿ ಬಿಲ್ಲು ನೀಡಲಾಗುತ್ತಿದೆ. ಮೀಟರ್ ರೀಡರ್ ಮಾಡಿದ ತಪ್ಪಿನಿಂದಾಗಿ ಹೀಗೆ ವಿದ್ಯುತ್ ಬಿಲ್ಲು ಮುದ್ರಣವಾಗಿತ್ತು. ಬಿಲ್ಲಲ್ಲಿ ಲೋಪ ಕಂಡುಬಂದರೆ ಅದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಆದರೂ, ಆತ ಕೊಟ್ಟಿದ್ದಾರೆ. ನಮಗೆ ಮಾಹಿತಿ ಲಭಿಸಿದ ತಕ್ಷಣ ನಾವು ಪರಿಷ್ಕೃತ ಬಿಲ್ಲನ್ನು ಸದಾಶಿವ ಅವರ ಮನೆಗೆ ತಲಪುಸಿದ್ದೇವೆ’ ಎಂದು ಮೆಸ್ಕಾಂನ ಉಳ್ಳಾಲ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post