ಮಣಿಪಾಲ, ಜೂ.14: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಮಣಿಪಾಲ ಎಂಐಟಿ ವಿದ್ಯಾರ್ಥಿ ಸೇರಿದಂತೆ ಮೂವರು ಪೆಡ್ಲರ್ಸ್‌ಗಳನ್ನು ಮಣಿಪಾಲ ಪೊಲೀಸರು ಬಂಧಿಸಿ, 75 ಸಾವಿರ ರೂ. ಮೌಲ್ಯದ 1.5ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮಣಿಪಾಲದ ಎಂಐಟಿ ವಿದ್ಯಾರ್ಥಿ ಶಶಾಂಕ (25) ಹಾಗೂ ಫೆಡ್ಲರ್‌ಗಳಾದ ಕಾರ್ಕಳದ ಆದಿಲ್(36) ಹಾಗೂ ನೌಶದ್(27) ಎಂದು ಗುರುತಿಸಲಾಗಿದೆ.
ಜೂ.14ರಂದು ಹೆರ್ಗಾ ಗ್ರಾಮದ ಹೈ-ಪಾಯಿಂಟ್ ಹೈಟ್ಸ್ ವಸತಿ ಸಮುಚ್ಛಯದ ಮೇಲೆ ದಾಳಿ ಮಾಡಿದ ಪೊಲೀಸರು, ಸಮುಚ್ಛಯದಲ್ಲಿ ವಾಸವಾಗಿದ್ದ ಶಶಾಂಕ ಹಾಗೂ ಆತನ ಜೊತೆ ಇದ್ದ ಆದಿಲ್‌ನನ್ನು ವಶಕ್ಕೆ ಪಡೆದು ಸುಮಾರು 300 ಗ್ರಾಂ ಗಾಂಜಾ ಜಪ್ತಿ ಮಾಡಿದರು. ನಂತರ ಆದಿಲ್ ನೀಡಿದ ಮಾಹಿತಿಯಂತೆ ಹಿರಿಯಡ್ಕ ಕಾರ್ಕಳ ರಸ್ತೆಯಲ್ಲಿ ನೌಶದ್‌ನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 1 ಕೆಜಿ 100 ಗ್ರಾಂ ಗಾಂಜಾ ವನ್ನು ವಶ ಪಡಿಸಿಕೊಳ್ಳಲಾಗಿದೆ.

ಉಡುಪಿ ಎಸ್ಪಿ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನ ದಲ್ಲಿ ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಡಿವೈಎಸ್ಪಿ ದಿನಕರ ಕೆ.ಪಿ., ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ., ಠಾಣಾ ಸಿಬ್ಬಂದಿಗಳಾದ ಎಎಸ್ಸೈ ಶೈಲೇಶ್ ಕುಮಾರ್, ಸುಕುಮಾರ್ ಶೆಟ್ಟಿ, ಅಬ್ದುಲ್ ರಜಾಕ್, ಇಮ್ರಾನ್, ಚೆನ್ನೇಶ್, ಆನಂದಯ್ಯ ಈ ಕಾರ್ಯಾ ಚರಣೆ ನಡೆಸಿದ್ದಾರೆ.
ಪ್ರಮುಖ ಆರೋಪಿ ಪತ್ತೆಗೆ ಲುಕ್‌ಔಟ್ ನೋಟೀಸ್ : ಆದಿಲ್ ಮತ್ತು ನೌಶದ್ ಅವರ ಸ್ನೇಹಿತ ಕಾರ್ಕಳದ ನಿವಾಸಿ, ಪ್ರಸ್ತುತ ಒಮನ್ ದೇಶದ ಮಸ್ಕತ್‌ನಲ್ಲಿರುವ ಇಮ್ರಾನ್ ಖಾನ್ ಯಾನೆ ಶಕೀಲ್ ಎಂಬಾತ ಅಲ್ಲಿಂದ ನೌಶದ್ ಮತ್ತು ಆದಿಲ್‌ರನ್ನು ಸಂಪರ್ಕಿಸಿ ಕಾಸರಗೋಡಿನ ಉಪ್ಪಳ ದಿಂದ ಗಾಂಜಾ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಕಂಡು ಬಂದಿದೆ. ಪ್ರಕರಣದ ಮುಖ್ಯ ಆರೋಪಿ ಇಮ್ರಾನ್ ಖಾನ್‌ನ ಪತ್ತೆಗೆ ಜಿಲ್ಲಾಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ತಂಡ ರಚಿಸಿ ಆತನ ವಿರುದ್ಧ ಲುಕ್ ಔಟ್ ನೊಟೀಸ್ ಹೊರಡಿಸಲು ಸೂಚಿಸಿದ್ದಾರೆ. ಮಾದಕ ವಸ್ತುಗಳ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post