ಪುತ್ತೂರು, ಜುಲೈ 22 ಕೌಟುಂಬಿಕ ಕಿರುಕುಳದಿಂದ ಸಾವನ್ನಪ್ಪಿದ್ದಾಳೆ ಎನ್ನಲಾದ ಸುಳ್ಯದ ಸಂಪಾಜೆಯ ಮಹಿಳೆಯ ಅಸಹಜ ಸಾವಿನ ಪ್ರಕರಣದಲ್ಲಿ ಸುಳ್ಯ ಪೊಲೀಸರು ಆಕೆಯ ಮಾವ, ಅತ್ತೆ ಮತ್ತು ನಾದಿನಿಯನ್ನು ಬಂಧನ ಮಾಡಿದ್ದಾರೆ.
ತನ್ನ ಮಗಳು ಫಾತಿಮತ್ ನಿಶಾನಾ ಜುಲೈ 18ರಂದು ಫೋನ್ ಮಾಡಿ ಅತ್ತೆ, ಮಾವ ಕಿರುಕುಳ ನೀಡುತ್ತಿದ್ದಾರೆಂದು ಹೇಳಿದ್ದು ಬಳಿಕ ಆಕೆಯ ಮನೆಗೆ ತೆರಳಿದಾಗ ಸಾವನ್ನಪ್ಪಿದ್ದಳು. ಇದಕ್ಕೆ ಆಕೆಯ ಅತ್ತೆ ಮಾವಂದಿರ ಕಿರುಕುಳವೇ ಕಾರಣವೆಂದು ಪುತ್ತೂರು ಕೆದುಂಬಾಡಿ ನಿವಾಸಿ ಜುಬೈದಾ ಸುಳ್ಯ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಇದೀಗ ಮಾವ ಸಿಪಿ ಅಳವಿ (54), ಅತ್ತೆ ಆಯಿಷಾ ಸಿಎ ಹಾಗೂ ನಾದಿನಿ ಫಸೀಲಾ ಸಿಎ (29) ಎಂಬವರನ್ನು ಬಂಧಿಸಿದ್ದಾರೆ.

ಫಾತಿಮಾಳನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಅತ್ತೆ ಮಾವ ಮತ್ತು ನಾದಿನಿ ನಿರಂತರ ಕಿರುಕುಳ ನೀಡಿದ್ದಲ್ಲದೆ, ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಮೊನ್ನೆ ಜುಲೈ 18ರಂದು ರಾತ್ರಿ ತನ್ನ ತಾಯಿ ಜೊತೆಗೆ ಫಾತಿಮಾ ಮಾತನಾಡುತ್ತಿದ್ದಾಗಲೇ ಮಾವ ಅಳವಿ ಫೋನ್ ಕಿತ್ತುಕೊಂಡು ನಿನ್ನ ಮಗಳನ್ನು ಕೊಂದೇ ತೀರುತ್ತೇನೆಂದು ಹೇಳಿದ್ದರು. ಮರುದಿನ ಬೆಳಗ್ಗೆ ನೋಡಿದರೆ ಫಾತಿಮಾ ಮೃತಪಟ್ಟ ಸ್ಥಿತಿಯಲ್ಲಿದ್ದಳು. ಗಂಡನಿಲ್ಲದ ಸಮಯದಲ್ಲಿ ಅತ್ತೆ ಮಾವನ ಕಿರುಕುಳಕ್ಕೆ ಬೇಸತ್ತು ಫಾತಿಮಾ ಸಾವಿಗೆ ಶರಣಾಗಿದ್ದೇ, ಇವರೇ ಕುತ್ತಿಗೆ ಹಿಸುಕಿ ಕೊಲೆಗೈದರೇ ಎನ್ನುವ ಪ್ರಶ್ನೆಗಳಿವೆ. ಸದ್ಯ ಮೂವರ ಬಂಧನವಾಗಿದ್ದು ವಿಚಾರಣೆ ಬಳಿಕ ಸಾವಿನ ಕಾರಣ ತಿಳಿಯಲಿದೆ.

Discover more from Coastal Times Kannada
Subscribe to get the latest posts sent to your email.







Discussion about this post