ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವಿಚಾರಣಾಧೀನ ಕೈದಿಗಳು ಅಕ್ರಮವಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರ ಪೊಲೀಸರು ಜೈಲಿನ ಮೇಲೆ ಸೋಮವಾರ ರಾತ್ರಿ ದಿಢೀರ್ ದಾಳಿ ನಡೆಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಕುಖ್ಯಾತ ಕೊಲೆ, ಮಾದಕ ವಸ್ತು (NDPS) ಮತ್ತು ಕೋಕಾ (KCOCA) ಪ್ರಕರಣಗಳ ಒಟ್ಟು 9 ಮಂದಿ ಕೈದಿಗಳ ಬಳಿಯಿದ್ದ 10 ಸ್ಮಾರ್ಟ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಅಕ್ರಮ ಕೃತ್ಯಕ್ಕೆ ಸಂಬಂಧಿಸಿದಂತೆ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 82/2026, ಕಲಂ 323 ಬಿಎನ್‌ಎಸ್ (BNS) ಹಾಗೂ ಕರ್ನಾಟಕ ಕಾರಾಗೃಹ ಕಾಯ್ದೆಯ ಕಲಂ 42ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9 ಮಂದಿ ಕೈದಿಗಳಿಂದ ಮೊಬೈಲ್ ಜಪ್ತಿ: ಸೋಮವಾರ ರಾತ್ರಿ ಪೊಲೀಸರ ವಿಶೇಷ ತಂಡ ಜೈಲಿನ ಮೇಲೆ ಅನಿರೀಕ್ಷಿತವಾಗಿ ದಾಳಿ ನಡೆಸಿ, ವಿವಿಧ ಬ್ಯಾರಕ್‌ಗಳಲ್ಲಿ ಕೂಲಂಕಷ ತಪಾಸಣೆ ನಡೆಸಿತು. ಈ ವೇಳೆ, ಜೈಲಿನ ‘ಎ-ಬ್ಲಾಕ್’ನಲ್ಲಿ ಅಕ್ರಮವಾಗಿ ಬಚ್ಚಿಟ್ಟುಕೊಂಡಿದ್ದ 10 ಮೊಬೈಲ್ ಸ್ಮಾರ್ಟ್‌ಫೋನ್‌ಗಳು ಪತ್ತೆಯಾಗಿವೆ. ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್ ಮತ್ತು ಅರ್ಫಜ್ ಇದ್ದ ಬ್ಯಾರಕ್‌ಗಳಲ್ಲಿ ಮೊಬೈಲ್ ಪತ್ತೆಯಾಗಿದೆ.
ಜಿಲ್ಲಾ ಕಾರಾಗೃಹದಂತಹ ಬಿಗಿ ಭದ್ರತೆಯ ಜಾಗಕ್ಕೆ ಇಷ್ಟೊಂದು ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳು ಹೇಗೆ ಸರಬರಾಜಾದವು? ಇವುಗಳ ಮೂಲಕ ಕೈದಿಗಳು ಹೊರಗಿನ ಯಾರೊಂದಿಗೆ ಸಂಪರ್ಕದಲ್ಲಿದ್ದರು? ಎಂಬ ಆಯಾಮದಲ್ಲಿ ಬರ್ಕೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮೊಬೈಲ್‌ಗಳ ಕಾಲ್ ಡಿಟೇಲ್ಸ್ (CDR) ಹಾಗೂ ನೆಟ್‌ವರ್ಕ್ ಬಳಕೆಯ ಕುರಿತು ತಾಂತ್ರಿಕ ಪರಿಶೀಲನೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post