ಮೂಡುಬಿದಿರೆ: ಬಟ್ಟೆಗಳನ್ನು ಒಣಗಿಸಲು ಹೋದ ಯುವಕನಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿದ್ದು, ಆತನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಆಘಾತಕ್ಕೆ ಒಳಗಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಅತ್ಯಂತ ದಾರುಣ ಘಟನೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಕೆಳಗಿನ ಮನೆ ಎಂಬಲ್ಲಿ ಸಂಭವಿಸಿದೆ.
ಮನೆಯಲ್ಲಿ ಸ್ನಾನ ಮುಗಿಸಿ ಬಂದ ಶೋನ್ ಮಸ್ಕರೇನಸ್, ಒದ್ದೆ ಬಟ್ಟೆಗಳನ್ನು ಮನೆಯ ಹೊರಭಾಗದಲ್ಲಿದ್ದ ಬಟ್ಟೆ ಒಣಗಿಸುವ ತಂತಿಗೆ ಹಾಕಲು ಹೋಗಿದ್ದರು. ಇವರ ಹಂಚಿನ ಮನೆಗೆ ಮರದ ಬದಲಾಗಿ ಕಬ್ಬಿಣದ ಪಕ್ಕಾಸು ಅಳವಡಿಸಲಾಗಿತ್ತು. ವಿದ್ಯುತ್ ಕಂಬದಿಂದ ಸರ್ವೀಸ್ ವೈರ್ ನೇರವಾಗಿ ಸಂಪರ್ಕಗೊಂಡಿದ್ದ ಸ್ಥಳದಲ್ಲಿ ವೈರ್ ಕಿತ್ತುಕೊಂಡು ಕಬ್ಬಿಣದ ಪಕ್ಕಾಸಿಗೆ ವಿದ್ಯುತ್ ಪ್ರವಹಿಸಿತ್ತು ಎನ್ನಲಾಗಿದೆ. ಬಟ್ಟೆ ಒಣಗಿಸುವ ತಂತಿಯು ಈ ಕಬ್ಬಿಣದ ಸಂಪರ್ಕದಲ್ಲಿದ್ದ ಕಾರಣ, ಶೋನ್ ಬಟ್ಟೆ ಹಾಕುತ್ತಿದ್ದಂತೆಯೇ ಆತನಿಗೆ ಭಾರಿ ಪ್ರಮಾಣದ ವಿದ್ಯುತ್ ಆಘಾತ ಉಂಟಾಗಿದೆ. ಆತ ಕಿರುಚಿಕೊಂಡಾಗ, ಗಾಬರಿಯಿಂದ ಆತನ ರಕ್ಷಣೆಗೆ ಧಾವಿಸಿದ ತಾಯಿ ಮರ್ಸಿ ಮಸ್ಕರೇನಸ್ ಮಗನನ್ನು ಎಳೆಯಲು ಹೋಗಿದ್ದು, ಅವರಿಗೂ ತೀವ್ರವಾಗಿ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮರ್ಸಿ ಮಸ್ಕರೇನಸ್ ಅವರ ಪತಿ ಸೈಮನ್ ಮಸ್ಕರೇನಸ್ ಸುಮಾರು 15 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸವಾಗಿದ್ದು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೀಗಾಗಿ ರಾತ್ರಿ ನಡೆದ ಈ ದುರಂತ ಯಾರ ಗಮನಕ್ಕೂ ಬಂದಿರಲಿಲ್ಲ. ಗುರುವಾರ ಮುಂಜಾನೆ ಸುಮಾರು 7ರಿಂದ 8 ಗಂಟೆಯ ವೇಳೆಗೆ ತೋಟದ ಕೆಲಸಕ್ಕಾಗಿ ಕಾರ್ಮಿಕ ಸುಂದರ ಪೂಜಾರಿ ಎಂಬುವರು ಮನೆಗೆ ಬಂದಾಗ ತಾಯಿ-ಮಗ ಇಬ್ಬರೂ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪಾಲಡ್ಕ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಮೂಡುಬಿದಿರೆ ಪೊಲೀಸರು ಹಾಗೂ ಮೆಸ್ಕಾಂ (MESCOM) ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post