ಮಂಗಳೂರು, ಅ.24: ಗಂಡನೇ ತನ್ನ ಪತ್ನಿಯನ್ನು ಹೊಡೆದು ಕೊಲೆಗೈದು ಮುಚ್ಚಿಟ್ಟ ಆರೋಪ ಕೇಳಿಬಂದಿದ್ದು ಬಂಟ್ವಾಳ ಪೊಲೀಸರು ಬೆಳಗಾವಿ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಬೆಳಗಾವಿ ಅಥಣಿ ನಿವಾಸಿ ಅರುಣ್ ಮಹಾದೇವ್ ದೇಸಂಗಿ (26) ಎಂಬವರ ದೂರಿನಂತೆ, ಆರೋಪಿ ಜಮಖಂಡಿ ನಿವಾಸಿ, ಬಂಟ್ವಾಳದ ವಗ್ಗದಲ್ಲಿ ವಾಸವಿದ್ದ ಸಂಜೀವ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಅರುಣ್ ಅವರ ತಂಗಿ ಸುನೀತಾ ದೇಸಂಗಿ (34) ಎಂಬವರನ್ನು ಬಾಗಲಕೋಟೆ, ಜಮಖಂಡಿ ನಿವಾಸಿ ಆರೋಪಿತ ಸಂಜೀವಕುಮಾರ್ (36) ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು, ದಂಪತಿ ಬಂಟ್ವಾಳ ವಗ್ಗ ಎಂಬಲ್ಲಿ ವಾಸವಿದ್ದರು. ದಂಪತಿ ನಡುವೆ ಈ ಹಿಂದೆ ಹಲವು ಬಾರಿ ವೈವಾಹಿಕ ಕಲಹ ನಡೆಯುತ್ತಿದ್ದು, ಸಂಬಂಧಿಕರು ಸೇರಿ ರಾಜಿ ಸಂಧಾನ ಮಾಡಿದ್ದರು. ಈ ನಡುವೆ, ಸುನೀತಾ ಹೆರಿಗೆಯಾಗಿ ತವರು ಮನೆಯಲ್ಲಿದ್ದು ಆರೋಪಿ ಸಂಜೀವ ಅ.4 ರಂದು ಬಂಟ್ವಾಳದ ತನ್ನ ಮನೆಗೆ ಕರೆತಂದಿದ್ದ.
ಅಕ್ಟೋಬರ್ 22 ರಂದು ಸುನೀತಾರವರು ತಮ್ಮ ಸಹೋದರನಿಗೆ ಕರೆ ಮಾಡಿ, ಆರೋಪಿ ಗಂಡನು ತನಗೆ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ, ಅಕ್ಟೋಬರ್ 23 ರಂದು ಮುಂಜಾನೆ ಆರೋಪಿ ಸಂಜೀವಕುಮಾರ್ ಪಿರ್ಯಾದಿದಾರರಿಗೆ (ಮೃತೆಯ ಸಹೋದರನಿಗೆ) ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದನು.
ತಕ್ಷಣವೇ ಸಂಬಂಧಿಕರು ಬಂದು ಪರಿಶೀಲಿಸಿದಾಗ, ಸುನೀತಾ ಅವರು ಈಗಾಗಲೇ ಮೃತಪಟ್ಟಿರುವುದು ತಿಳಿದುಬಂದಿದೆ. ಮೃತಳ ಶರೀರವನ್ನು ಗಮನಿಸಿದಾಗ ಅಲ್ಲಲ್ಲಿ ಹಲ್ಲೆ ನಡೆಸಿದ ಗಾಯಗಳ ಗುರುತುಗಳು ಹಾಗೂ ರಕ್ತದ ಕಲೆಗಳು ಸ್ಪಷ್ಟವಾಗಿ ಕಂಡುಬಂದಿವೆ.
ಆರೋಪಿ ವಶಕ್ಕೆ: ಅಕ್ಟೋಬರ್ 22ರ ರಾತ್ರಿಯಿಂದ ಅಕ್ಟೋಬರ್ 23ರ ಮುಂಜಾನೆವರೆಗಿನ ಅವಧಿಯಲ್ಲಿ ಆರೋಪಿ ಸಂಜೀವಕುಮಾರ್ ಕೌಟುಂಬಿಕ ಕಲಹದ ಶಂಕೆಯಿಂದ ತನ್ನ ಪತ್ನಿ ಸುನೀತಾರವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಮೃತೆಯ ಸಹೋದರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2026, ಕಲಂ: 103 BNS 2023 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಸಂಜೀವಕುಮಾರ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.







Discussion about this post