ಮಂಗಳೂರು: ವಿದೇಶ ದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ನಗರ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಏರ್‌ಟೆಲ್ ಕಂಪೆನಿಯ 86 ಸಿಮ್‌ಕಾರ್ಡಗಳು, 2 ಮೊಬೈಲ್ ಪೋನ್‌ಗಳು, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬೆಳ್ತಂಗಡಿಯ ಶಮದ್ ಮಹಮ್ಮದ್ ಸಮರ್ (26) ಮತ್ತು ಮಹಮ್ಮದ್ ಅಜೀಂ (19) ಬಂಧಿತರು. ಶಮದ್ ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ಬಾಡಿಗೆ ಮನೆಯಲ್ಲಿದ್ದ. ಮಹಮ್ಮದ್ ಅಜೀಂ ಕೂಡ ನಗರದಲ್ಲೇ ಬಾಡಿಗೆ ಮನೆಯಲ್ಲಿದ್ದ. ಇವರು ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್‌ನ ಸಾಜೀದ್‌ನ ಸೂಚನೆಯಂತೆ ತಮ್ಮ ಗೆಳೆಯರು, ಪರಿಚಿತರಿಗೆ ಸ್ವಲ್ಪ ಹಣ ನೀಡಿ ಪುಸಲಾಯಿಸಿ ಅವರಿಂದ ಸಿಮ್‌ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದರು.
500ಕ್ಕೂ ಅಧಿಕ ಸಿಮ್ ವಿದೇಶಕ್ಕೆ ರವಾನೆ : ಆರೋಪಿಗಳು ಕಳೆದ ಜನವರಿ ಯಿಂದಲೇ ಈ ದಂಧೆ ನಡೆಸುತ್ತಿದ್ದು, ಇದುವರೆಗೆ 400ರಿಂದ 500 ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ತನ್ನ ಗೆಳೆಯರು, ಪರಿಚಿತರಿಗೆ 200ರಿಂದ 300 ರೂ. ನೀಡಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಅದನ್ನು ಮುಸ್ತಾಫ ಮತ್ತು ಸಾಜೀದ್‌ಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ.
ದುಬಾೖ ಹಾಗೂ ಇತರ ಕೆಲವು ದೇಶಗಳಲ್ಲಿರುವ ಸೈಬರ್ ವಂಚಕರು ಭಾರತದ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಭಾರತೀಯರಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಾರೆ. ಭಾರತೀಯ ಸಿಮ್‌ಗಳಾದರೆ ಆ ಸಂಖ್ಯೆಯನ್ನು ಬಳಸಿ ಭಾರತೀಯರನ್ನು ನಂಬಿಸಿ ವಂಚಿಸುವುದು ಸುಲಭ ಎಂಬುದು ವಂಚಕರ ಲೆಕ್ಕಾಚಾರ.
Discover more from Coastal Times Kannada
Subscribe to get the latest posts sent to your email.
Discussion about this post