ಬಂಟ್ವಾಳ : ಮಂಗಳವಾರ (ಸೆ. 13ರ) ರಾತ್ರಿ ಘಟನೆ ನಡೆದಿದ್ದು, ಕೊಡಂಗೆ ಬನಾರಿ ಮನೆಯ ಶೀನಪ್ಪ ದೇವಾಡಿಗ ಅವರ ಪುತ್ರ ಗಣೇಶ್ ಬಂಗೇರ (54) ಸಾವನ್ನಪ್ಪಿದವರು. ಅವರ ಸಹೋದರ ಪದ್ಮನಾಭ ಬಂಗೇರ (49) ಆರೋಪಿ. ಪದ್ಮನಾಭ ಬಂಗೇರ ತನ್ನ ಅಣ್ಣ ಗಣೇಶ್ ಬಂಗೇರನಿಗೆ ಯಾವುದೋ ದ್ವೇಷದಿಂದ ಆಗಾಗ ಹಲ್ಲೆ ನಡೆಸುತ್ತಿದ್ದ. ಅಲ್ಲದೇ ಗಣೇಶನನ್ನು ಕೊಲ್ಲುವುದಾಗಿ ಕೂಡ ಹೇಳಿರುತ್ತಾರೆ. ಆದರೆ, ಈ ರೀತಿ ರಾತ್ರಿ ಸಮಯದಲ್ಲಿ ಪದ್ಮನಾಭ ಬಂಗೇರ ಅವರು ಗಣೇಶ್ ಬಂಗೇರ ಅವರನ್ನು ತಲೆ, ಎದೆ ಹಾಗೂ ಮುಖಕ್ಕೆ ಯಾವುದೋ ಆಯುಧದಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿ ಕೊಂದಿದ್ದಾರೆ. ಆ ಬಳಿಕ ಮೃತದೇಹದ ಬಟ್ಟೆಗಳನ್ನು ಹಾಗೂ ಮೃತ ದೇಹವನ್ನು ಸ್ವಚ್ಛಗೊಳಿಸಿ ಮಲಗುವ ಕೋಣೆಯ ಮಂಚದ ಮೇಲೆ ಮಲಗಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ: ಮಂಗಳವಾರ ರಾತ್ರಿ ಮಲಗಿದ್ದ ಗಣೇಶ್ ಬಂಗೇರ ಅವರನ್ನು ತಮ್ಮನೇ ತಲೆಗೆ ಹೊಡೆದು ಕೊಲೆ ಮಾಡಿದ್ದು, ಆನಂತರ ಏನೂ ಆಗಿರದಂತೆ ಮಲಗಿದ್ದ. ಬೆಳಗ್ಗೆ ತಾಯಿ ಹತ್ತಿರ ಬಂದು ಕರೆದಾಗ, ಮಗ ಏಳದೇ ಇರುವುದನ್ನು ಕಂಡು ಮಗಳಿಗೆ ಫೋನ್ ಮಾಡಿ ತಿಳಿಸಿದ್ದರು. ಮಗಳು, ಇತರ ಸಂಬಂಧಿಕರು ಬಂದು ನೋಡಿದಾಗ ಗಣೇಶ್ ಮಲಗಿದಲ್ಲೇ ಸಾವನ್ನಪ್ಪಿದ್ದರು. ಯಾವುದೋ ಆಯುಧದಿಂದ ಹೊಡೆದು ಕೊಲೆಗೈದಿದ್ದಾಗಿ ಮಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಗಣೇಶ್ ಬಂಗೇರ ಅವರನ್ನು ತಲೆ, ಎದೆಯ ಭಾಗಕ್ಕೆ ಹೊಡೆದು ಕೊಲೆಗೈದು ರಕ್ತವನ್ನು ಒರೆಸಿ ಮಂಚದಲ್ಲಿ ಮಲಗಿಸಲಾಗಿತ್ತು ಎಂದು ಆಪಾದಿಸಲಾಗಿದೆ. ಸಹೋದರರಿಬ್ಬರೂ ವಿವಾಹವಾಗಿದ್ದರೂ ಪತ್ನಿಯರು ಅವರೊಂದಿಗೆ ವಾಸವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ವಿಟ್ಲ ಇನ್ಸ್ಪೆಕ್ಟರ್ ನಾಗರಾಜ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ, ಮಾಹಿತಿ ಸಂಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post