ಮಂಗಳೂರು, ನ.15: ಬಳ್ಳಾಲ್ ಬಾಗ್ ನಲ್ಲಿ ನಡೆದ ಹಲ್ಲೆ ಕೃತ್ಯದ ನೆಪದಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್, ಬಿರುವೆರ್ ಕುಡ್ಲ ಸಂಘಟನೆಯ ಹೆಸರೆತ್ತಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಂಘಟನೆಯ ಮುಖಂಡರು ಸುದ್ದಿಗೋಷ್ಠಿ ಕರೆದು ಶರಣ್ ಪಂಪ್ವೆಲ್ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬಜರಂಗ ದಳದ ಮುಖಂಡ ಶರಣ್ ಪಂಪ್‌ವೆಲ್‌ಗೆ ಮುಸ್ಲಿಮರ ಹಣ ಆಗುತ್ತದೆ. ಆದರೆ ಮುಸ್ಲಿಂ ಯುವಕರು ಯಾಕೆ ಆಗುವುದಿಲ್ಲ ಎಂದು ಬಿರುವೆರ್ ಕುಡ್ಲ ಮಂಗಳೂರು ಪ್ರಶ್ನಿಸಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್ ಈ ಹಿಂದೆ ನಡೆದ ಸಭೆಯೊಂದರಲ್ಲಿ ಶರಣ್ ಪಂಪ್ವೆಲ್ ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ ಎಂದಿದ್ದರು. ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದರು.
ಶರಣ್ ಪಂಪ್ವೆಲ್ ಬಿರುವೆರ್ ಕುಡ್ಲದ ಬಗ್ಗೆ ಮಾನಹಾನಿಯಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಬಿರುವರ್ ಕುಡ್ಲ ಕಾನೂನು ಹೋರಾಟ ನಡೆಸಲಿದೆ ಎಂದು ಲಕ್ಷ್ಮೀಶ್ ತಿಳಿಸಿದರು.
ಬಿರುವೆರ್ ಕುಡ್ಲದ ದೀಪು ಶೆಟ್ಟಿಗಾರ್ ಮಾತನಾಡಿ ಶರಣ್ ಪಂಪ್ವೆಲ್ ಪ್ರತಿ ಬಾರಿ ಮುಸ್ಲಿಂ, ಮುಸ್ಲಿಂ ಎಂದು ಹೇಳುತ್ತಾರೆ. ಇವರಿಗೆ ಮುಸ್ಲಿಮರ ದುಡ್ಡು ಆಗುತ್ತದೆ. ಮುಸ್ಲಿಮರ ಜೊತೆಗೆ ವ್ಯವಹಾರ ನಡೆಸಲಿಕ್ಕೆ ಆಗುತ್ತದೆ. ಸಿಟಿ ಸೆಂಟರಲ್ಲಿ ಮೆಂಟೆನೇನ್ಸ್ ಹೆಸರಲ್ಲಿ ಎಷ್ಟು ಹಣದ ವ್ಯವಹಾರ ಇಟ್ಟುಕೊಂಡಿಲ್ಲ. ನಮ್ಮ ಸಂಘಟನೆ ಯಾವುದೇ ಜಾತಿಗೆ ಸೀಮಿತ ಆಗಿಲ್ಲ. ಎಲ್ಲ ಮತೀಯರು, ಜಾತಿಯವರೂ ನಮ್ಮ ಜೊತೆ ಇದ್ದಾರೆ. ಮುಸ್ಲಿಮರೂ ಇದ್ದಾರೆ. ಮುಸ್ಲಿಂ ಅಂದ ಕೂಡಲೇ ಕೆಟ್ಟವರು ಅನ್ನುವುದು ತಪ್ಪು. ನಮ್ಮ ಪ್ರಧಾನಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಇವರದೇ ಸಂಘಟನೆಯ ವ್ಯಕ್ತಿಯಾಗಿ ಇವರು ಮುಸ್ಲಿಮರನ್ನು ನಿಂದಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು..
ಬಳ್ಳಾಲ್ ಬಾಗ್ ಪರಿಸರದಲ್ಲಿ ಕುಡಿದು, ಕೆಟ್ಟ ಚಟುವಟಿಕೆಗಳಲ್ಲಿ ತೊಡಗಿಸುವುದು, ಮಹಿಳೆಯರಿಗೆ ಚುಡಾಯಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಅಲ್ಲಿನ ನಿವಾಸಿಗಳು ಬರ್ಕೆ ಠಾಣೆಗೆ ಎರಡು ಬಾರಿ ದೂರು ಕೊಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಗಮನಕ್ಕೆ ಬಂದಿಲ್ಲವೇ.. ಈಗ ಅದೇ ಪ್ರದೇಶದಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದೀರಿ. ಕೋಮು ಪ್ರಚೋದನೆ ಮಾಡುತ್ತಿದ್ದೀರಿ. ಅದಕ್ಕೆ ನಮ್ಮ ಹೆಸರನ್ನು ಎಳೆದು ತಂದಿದ್ದೀರಿ. ನೀವು ಈ ಬಗ್ಗೆ ಬಹಿರಂಗ ಕ್ಷಮೆ ಯಾಚಿಸದಿದ್ದರೆ ನಾವು ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಜೊತೆಗೆ, ನಿಮ್ಮ ಖಾಸಗಿ ವಹಿವಾಟಿನ ಬಗ್ಗೆ ಪುರಾವೆ ಸಹಿತ ಮುಂದಿಡಲಿದ್ದೇವೆ ಎಂದು ಸಂಘಟನೆಯ ರಾಕೇಶ್ ಪೂಜಾರಿ ಹೇಳಿದರು.
ಬಿರುವೆರ್ ಕುಡ್ಲ ಸಂಘಟನೆಯ ಸ್ಥಾಪಕ ಸದಸ್ಯ ಉದಯ ಪೂಜಾರಿ, ರಾಕೇಶ್ ಸಾಲ್ಯಾನ್ ಸೇರಿದಂತೆ 25ಕ್ಕೂ ಹೆಚ್ಚು ವಿವಿಧ ಘಟಕಗಳ ಸದಸ್ಯರು ಸುದ್ದಿಗೋಷ್ಟಿಯಲ್ಲಿದ್ದರು.