ಉಡುಪಿ, ಜ.16: ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯ ಚರ್ತುಥ ಪರ್ಯಾಯ ಮಹೋತ್ಸವ ವನ್ನು ಸ್ವಾಮೀಜಿಯ ಸೂಚನೆಯಂತೆ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸಲು ತೀರ್ಮಾನಿಸಿರುವುದಾಗಿ ಪರ್ಯಾಯ ಮಹೋತ್ಸವ ಸಮಿತಿ ಘೋಷಿಸಿದೆ.
ಸಮಿತಿ ಗೌರವಾಧ್ಯಕ್ಷ ಕೆ.ಸೂರ್ಯನಾರಾಯಣ ಉಪಾಧ್ಯಾಯರು ಹಾಗೂ ಕಾರ್ಯಾಧ್ಯಕ್ಷ ಮತ್ತು ಶಾಸಕ ಕೆ.ರಘುಪತಿ ಭಟ್ ಉಪಸ್ಥಿತಿಯಲ್ಲಿ ಶನಿವಾರ ರಾತ್ರಿ ನಡೆದ ಪರ್ಯಾಯೋತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಾಗೂ ಸರಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪೂರ್ಣವಾಗಿ ಸಹಕರಿಸಬೇಕೆಂಬ ಭಾವಿ ಪರ್ಯಾಯ ಕೃಷ್ಣಾಪುರ ಸ್ವಾಮೀಜಿಯ ಆಶಯದಂತೆ ಜ.18ರ ನಸುಕಿನ ವೇಳೆ ನಡೆಯುವ ಪರ್ಯಾಯೋತ್ಸವ ಮೆರವಣಿಗೆ ಮತ್ತು ನಂತರ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಸಭೆಯನ್ನು ತೀರಾ ಸಾಂಪ್ರದಾಯಿಕತೆಗೆ ಆದ್ಯತೆ ನೀಡಿ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ.
ಮೆರವಣಿಗೆಗೆ ಆಹ್ವಾನಿಸಲಾದ ಸುಮಾರು 40 ಜನಪದ ಕಲಾವಿದರ ತಂಡಗಳ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಸಾಂಪ್ರದಾಯಿಕವಾದ ವಾದ್ಯ, ಬ್ಯಾಂಡ್, ಚಂಡೆ, ಡೊಳ್ಳು ವಾದನಗಳು ಮಾತ್ರ ಇರಲಿವೆ. ಸ್ವಾಮೀಜಿಯವರು ಪಾಲ್ಗೊಳ್ಳುವ ಅಲಂಕೃತ ವಾಹನಗಳು ಮತ್ತು ಕೆಲವು ಟ್ಯಾಬ್ಲೋಗಳಿಗೆ ಮಾತ್ರ ಅವಕಾಶ ನೀಡಲು ರವಿವಾರ ಸಮಿತಿ ಕಾರ್ಯಾಧ್ಯಕ್ಷ ಶಾಸಕ ಕೆ.ರಘುಪತಿ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಿರ್ಣಯ ಕೈಗೊಂಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post