ಬೆಂಗಳೂರು: ಕೋವಿಡ್-19 ರ ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಭಾನುವಾರ ಹೇಳಿದ್ದಾರೆ.
ಕೋವಿಡ್-19 ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನವು ಭಾನುವಾರಕ್ಕೆ ಒಂದು ವರ್ಷವನ್ನು ಪೂರೈಸಿದೆ. ಈ ನಡುವಲ್ಲೇ ನಗರದಲ್ಲಿ ಅಬಲಾಶ್ರಮ ಎಂಬ ಎನ್‌ಜಿಒ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಸ್ವಾಸ್ಥ್ಯ ಎಂಬ ಉಚಿತ ಆರೋಗ್ಯ ಸೇವಾ ಶಿಬಿರವನ್ನು ಸಚಿವರು ಉದ್ಘಾಟಿಸಿದರು.

ಈ ವೇಳೆ ಲಸಿಕೆ ಕುರಿತು ಮಾತನಾಡಿರುವ ಸಚಿವರು, ಕರ್ನಾಟಕದಲ್ಲಿ ಈವರೆಗೆ 9 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ. ಇದರಲ್ಲಿ ಎರಡೂ ಡೋಸ್‌ಗಳನ್ನು ಪಡೆದ 8 ಕೋಟಿಗೂ ಹೆಚ್ಚು ವಯಸ್ಕರು ಮತ್ತು 15 ರಿಂದ 17 ವರ್ಷದೊಳಗಿನ 19 ಲಕ್ಷ ಮಕ್ಕಳು ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದಲ್ಲದೆ, ಸುಮಾರು ಮೂರು ಲಕ್ಷ ನಾಗರೀಕರು ತಮ್ಮ ಮುನ್ನೆಚ್ಚರಿಕಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ಸೋಂಕು ತಗುಲಿದವರಿಗೆ ಪರಿಣಾಮಕಾರಿಯಾಗಿ ಮತ್ತು ತಕ್ಷಣವೇ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಮತ್ತು ಡೇಟಾ ಬಳಕೆಯ ಮೂಲಕ ಸಾಂಕ್ರಾಮಿಕ ರೋಗದ 3ನೇ ಅಲೆಯನ್ನು ನಿಯಂತ್ರಿಸಲಾಗುವುದು. 10,000 ಕ್ಕೂ ಹೆಚ್ಚು ವೈದ್ಯರಿಗೆ ಹೋಮ್ ಐಸೋಲೇಶನ್ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು, ರೋಗಿಗಳಿಗೆ ಯಾವ ರೀತಿ ಸಲಹೆ ನೀಡುವುದು, ಯಾವುದನ್ನು ಮಾಡಬೇಕು, ಮಾಡಬಾರದು ಎಂಬುದರ ಕುರಿತು ಶಿಕ್ಷಣ ನೀಡಲಾಗುತ್ತದೆ. ಈ ಮೂಲಕ ರಾಜ್ಯವು ಮೂರನೇ ಅಲೆಗೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಇದೇ ರೀತಿಯ ತರಬೇತಿ ನೀಡಲಾಗುವುದು ಎಂದರು.
ಅಬಲಾಶ್ರಮವು ಮಹಿಳೆಯರಿಗೆ ಸಹಾಯ ಮಾಡುವ ಮತ್ತು ಸಬಲೀಕರಣ ಮಾಡುವ ಗುರಿಯನ್ನು ಹೊಂದಿದೆ. ಉಚಿತ ಆರೋಗ್ಯ ಸೇವಾ ಶಿಬಿರದ ಮೂಲಕ ಅಗತ್ಯವಿರುವವರಿಗೆ ಬಹು-ವಿಶೇಷ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post