ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಅನ್ನು ಎನ್‌ಎಂಪಿಟಿ ಆವರಣಕ್ಕೆ ಸ್ಥಳಾಂತರಿಸಿ, ಅಲ್ಲಿಗೆ ಬರುವ ಸರಕು ವಾಹನಗಳಿಂದ ಶುಲ್ಕ ವಸೂಲಾತಿ ಮಾಡಲು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಂಸದರ ಪ್ರಕಟಣೆ ತಿಳಿಸಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ಮಂಗಳವಾರ ದೆಹಲಿಯ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ .
ಸುರತ್ಕಲ್ ಟೋಲ್ ಗೇಟ್ ಸ್ಥಳಾಂತರಗೊಳಿಸುವ ಬಗ್ಗೆ ಚರ್ಚಿಸಲಾಗಿದ್ದು, ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿರುವ ದೃಷ್ಠಿಯಿಂದ ಸುರತ್ಕಲ್ ಟೋಲ್ ಗೇಟ್ ಅನ್ನು ಎನ್‌ಎಂಪಿಟಿ ಆವರಣದ ಒಳಗೆ ಸ್ಥಳಾಂತರಿಸಿ ಸ್ಥಾಪಿಸುವುದು, ಎನ್.ಎಂ.ಪಿ.ಟಿ. ಒಳಗೆ ಬರುವ ಹಾಗೂ ಹೊರಗೆ ಹೋಗುವ ವಾಹನಗಳಿಂದ ಮಾತ್ರ ಟೋಲ್ ಸಂಗ್ರಹಿಸಲು ಸಚಿವರು ಸಭೆಯಲ್ಲಿ ಸೂಚಿಸಿದರು ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯರಾದ ಆರ್. ಕೆ. ಪಾಂಡೆ , ಹೆಚ್ಚುವರಿ ಕಾರ್ಯದರ್ಶಿ ಗೋ ಸಾಹೇಲ್ , ಹಾಗೂ ರಾಷ್ಟ್ರೀಯ ಹೆದ್ದಾರಿ ಸದಸ್ಯ ಮಹಾವೀರ್ ಸಿಂಗ್, ರಾಜ್ಯ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ , ಮೈಸೂರು ಸಂಸದಪ್ರತಾಪ್ ಸಿಂಹ , ಕೋಲಾರ ಸಂಸದರ ಮುನಿಸ್ವಾಮಿ ಇದ್ದರು ಎಂದು ಪ್ರಕಟಣೆಯಲ್ಲಿ ಸಂಸದರು ತಿಳಿಸಿದ್ದಾರೆ.