ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಪರಿವಾರದ ಕಾರ್ಯಕರ್ತನೊಬ್ಬ ದ.ಕ. ಬಿಜೆಪಿ ಜಿಲ್ಲಾ ಕಚೇರಿಯಲ್ಲೇ ಪತ್ರಕರ್ತರ ಮೇಲೆ ಶನಿವಾರ ಗೂಂಡಾಗಿರಿ ಎಸಗಿದ ಆರೋಪ ಕೇಳಿ ಬಂದಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕಾರ್ಯಕ್ರಮವು ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದಿದ್ದು, ಈ ಸಂದರ್ಭ ಪುತ್ತಿಲ ಪರಿವಾರದ ಕಾರ್ಯಕರ್ತ ಸಂದೀಪ್ ಉಪ್ಪಿನಂಗಡಿ ಎಂಬಾತ ಎಸಗಿರುವುದಾಗಿ ವರದಿಯಾಗಿದೆ.
ವರದಿ ಮಾಡಲು ಹೋದ ಮಾಧ್ಯಮದವರನ್ನು ತಳ್ಳಾಡಿದ್ದಲ್ಲದೆ ಅನುಚಿತವಾಗಿ ವರ್ತಿಸಿ ‘ಮಾಧ್ಯಮದವರು ಇಲ್ಲಿ ಯಾಕೆ ಬರುವುದು? ನಮಗೆ ಮಾಧ್ಯಮದವರ ಅಗತ್ಯವಿಲ್ಲ. ನಾವು ಒಂದಾಗಿ ಆಯಿತು’ ಎಂದು ಸಂದೀಪ್ ಉಪ್ಪಿನಂಗಡಿ ಹೇಳಿಕೊಂಡಿದ್ದಾನೆ.
ಕಳೆದ ಚುನಾವಣೆಯ ಸಂದರ್ಭ ಬಿಜೆಪಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿ ಗಮನ ಸೆಳೆದಿದ್ದ ಅರುಣ್ ಪುತ್ತಿಲ ಪರಿವಾರವು ಸಂಸದ ನಳಿನ್ ಕಟೀಲ್‌ಗೆ ಟಿಕೆಟ್ ಕೈ ತಪ್ಪುತ್ತಲೇ ಬಿಜೆಪಿ ಸೇರ್ಪಡೆಯ ಸುಳಿವು ನೀಡಿತ್ತು. ಅದರಂತೆ ಶನಿವಾರ ನಗರದ ಜಿಲ್ಲಾ ಕಚೇರಿಯಲ್ಲಿ ಅರುಣ್ ಕುಮಾರ್ ಪುತ್ತಿಲ ಪರಿವಾರ ಬಿಜೆಪಿಗೆ ಸೇರ್ಪಡೆಗೊಳ್ಳುವಾಗಲೇ ಈ ಗೂಂಡಾಗಿರಿ ನಡೆದಿದೆ.
ಪಕ್ಷದ ಗೆಲುವಿಗೆ ಶ್ರಮಿಸುವೆ: ಪುತ್ತಿಲ: ಕೊನೆಗೂ ಸುಮಾರು ಒಂದು ವರ್ಷದ ಬಳಿಕ ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನಗೊಂಡಿದೆ. ಈ ಮೂಲಕ ಬಿಜೆಪಿಯ ಬಂಡಾಯ ಗಾಯ ಉಪಶಮನಗೊಂಡಂತಾಗಿದೆ. ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಪುತ್ತಿಲ ಅವರು ಯಾವುದೇ ಷರತ್ತಿಲ್ಲದೇ ಪಕ್ಷಕ್ಕೆ ಸೇರ್ಪಡೆಗೊಂಡರು.ಇದೇ ವೇಳೆ ಅರುಣ್ ಮಾತನಾಡಿ, ನಾನೊಬ್ಬ ಆರ್‌ಎಸ್‌ಎಸ್ ಕಾರ್ಯ ಕರ್ತ ನಾಗಿದ್ದವನು, ಪಕ್ಷದಲ್ಲೂ ಇದ್ದವನು, ಯಾವುದೇ ಪದಾಧಿಕಾರಿ ಹುದ್ದೆ ಇಲ್ಲದೇ ಕೆಲಸ ಮಾಡಿದವನು, ಇಲ್ಲೂಯಾವುದೇ ಹುದ್ದೆ ಬಯಸಿ ಪಕ್ಷಕ್ಕೆ ಸೇರಿಲ್ಲ, ಬದಲಿಗೆ ಪ್ರಧಾನಿ ಮೋದಿ ಯವರನ್ನು ಮತ್ತೆ ಹತ್ತು ವರ್ಷ ಪ್ರಧಾನಿಯಾಗಿ ಮಾಡಬೇಕು ಎನ್ನು ವುದಕ್ಕಾಗಿ ಸೇರಿದ್ದೇನೆ ಎಂದರು.
ಲೋಕಸಭಾ ಚುನಾವಣೆಯ ಈ ಕಾಲಘಟ್ಟದಲ್ಲಿ ಇದೊಂದು ಒಳ್ಳೆಯ ಹೆಜ್ಜೆ. ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ದೇಶ ಅಭಿವೃದ್ಧಿ ಕಂಡಿದೆ. ಇನ್ನೂ 10 ವರ್ಷ ಅವರ ಆಡಳಿತ ದೇಶಕ್ಕೆ ಬೇಕಿದೆ. ಅದಕ್ಕಾಗಿ ನಮ್ಮೆಲ್ಲಾ ಕಾರ್ಯಕರ್ತರೂ ಪಕ್ಷದಲ್ಲಿ ಸಕ್ರಿಯರಾಗಿ ದುಡಿಯುವರು ಎಂದು ಪುತ್ತಿಲ ಹೇಳಿದರು.
ಜಿಲ್ಲಾ ಚುನಾವಣ ಉಸ್ತುವಾರಿ ನಿತಿನ್ ಕುಮಾರ್, ಪ್ರ. ಕಾರ್ಯದರ್ಶಿ ಕಿಶೋರ್, ಪ್ರಭಾರಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ., ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ವಿದ್ಯಾಗೌರಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post