ಮಂಗಳೂರು: ನೂತನ ಜಿಲ್ಲಾಡಳಿತ ಕೇಂದ್ರ ‘ಪ್ರಜಾ ಸೌಧ’ ಉದ್ಘಾಟನಾ ಸಮಾರಂಭಕ್ಕೆ ಮಂಗಳೂರಿಗೆ ಆಗಮಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿ, ಬೆಂಗಾವಲಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಡೀಲ್‌ನಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಯೆಯ್ಯಾಡಿಯಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಬಜ್ಪೆಯಲ್ಲಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯಲ್ಲಿ ಉಗ್ರರ ಕೈವಾಡವಿದೆ. ಹಾಗಾಗಿ, ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಹಾಗೂ ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಘೋಷಣೆ ಮಾಡಬೇಕು ಎಂದು ಬಿಜೆಪಿ ಮಂಗಳೂರು ಉತ್ತರ ಮಂಡಲ ಯುವಮೋರ್ಚಾ ಕಾರ್ಯಕರ್ತರು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ನಡೆಸಲು ಮುಂದಾದರು. ಈ ವೇಳೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ಕಾರ್ಯಕರ್ತರನ್ನು ಬಳಿಕ ಪೊಲೀಸ್ ಬಸ್ಸಿನಲ್ಲಿ ವಶಕ್ಕೆ ಪಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರಿನ ಪಡೀಲ್ ನಲ್ಲಿ ನಿರ್ಮಿಸಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಹಾಗೂ ಉಳ್ಳಾಲ ದರ್ಗಾ ಉರುಸ್ ನಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.
ಮಂಗಳೂರು ಏರ್ಪೋರ್ಟ್ ನಿಂದ ನೇರವಾಗಿ ಉರ್ವಾ ಮಾರ್ಕೆಟ್ ಬಳಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆಗಾಗಿ ಸಿಎಂ ಸಿದ್ದರಾಮಯ್ಯ ಮೊದಲು ತೆರಳಬೇಕಿತ್ತು. ಸಿದ್ದರಾಮಯ್ಯ ಚಾಮರಾಜನಗರದಿಂದ ಮಂಗಳೂರಿಗೆ ಆಗಮಿಸುವಾಗಲೇ ಸಂಜೆ ಗಂಟೆ 4.30 ಆಗಿದ್ದರಿಂದ ಉರ್ವಾ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ನೇರವಾಗಿ ಪಡೀಲಿಗೆ ತೆರಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post