ನವದೆಹಲಿ, ಆಗಸ್ಟ್.16: ಆಫ್ರಿಕಾದ ಕಾಂಗೋ ಸೇರಿದಂತೆ 13 ದೇಶಗಳಲ್ಲಿ ಮಂಕಿಫಾಕ್ಸ್ ಕಾಯಿಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ (WHO) ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ. 500ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ವೈರಸ್ ಹರಡುವುದನ್ನು ತಡೆಯಲು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಕರೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಮಂಕಿಫಾಕ್ಸ್ ಹೆಚ್ಚಳದ ಕುರಿತು ಮಾಹಿತಿ ನೀಡಿದರು. “ಕಳೆದ ವಾರ ನಾನು ಕಾಂಗೋ ಮತ್ತು ಆಫ್ರಿಕಾದ ಇತರ ದೇಶಗಳಲ್ಲಿ ಮಂಕಿಫಾಕ್ಸ್ನ ಉಲ್ಬಣವನ್ನು ಮೌಲ್ಯಮಾಪನ ಮಾಡಲು ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳಡಿಯಲ್ಲಿ ತುರ್ತು ಸಮಿತಿ ಸಭೆಯನ್ನು ಕರೆಯುತ್ತಿರುವುದಾಗಿ ತಿಳಿಸಿದ್ದೆ. ಅದರಂತೆ ಇಂದು ತುರ್ತು ಸಮಿತಿ ಭೇಟಿಯಾಗಿದ್ದು, ಅಂತಾರಾಷ್ಟ್ರೀಯ ಕಾಳಜಿಯ ದೃಷ್ಟಿಯಿಂದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸುವ ಅನಿವಾರ್ಯತೆ ಇದೆ ಎಂದು ಸಮಿತಿ ನನಗೆ ಸಲಹೆ ನೀಡಿದೆ. ನಾನು ಆ ಸಲಹೆಯನ್ನು ಸ್ವೀಕರಿಸಿದ್ದೇನೆ” ಎಂದು ತಿಳಿಸಿದರು.
“ಪೂರ್ವ ಕಾಂಗೋದಲ್ಲಿ ಮಂಕಿಫಾಕ್ಸ್ನ ಹೊಸ ಕ್ಲಾಡ್ ಪತ್ತೆ ಹಾಗೂ ತ್ವರಿತವಾಗಿ ಹರಡುತ್ತಿರುವುದು, ಜೊತೆಗೆ ಇದುವರೆಗೆ ಮಂಕಿಫಾಕ್ಸ್ ಪತ್ತೆಯಾಗಿರದ ನೆರೆಯ ದೇಶಗಳಲ್ಲೂ ಅದು ಕಾಣಿಸಿಕೊಂಡಿರುವುದು, ಆಫ್ರಿಕಾ ಮತ್ತು ಅದರಾಚೆಯ ದೇಶಗಳಲ್ಲೂ ಹರಡುವ ಸಾಧ್ಯತೆಯ ಬಗ್ಗೆ ಆತಂಕ ಮೂಡಿಸಿದೆ. ಆಫ್ರಿಕಾದ ಇತರ ಭಾಗಗಳಲ್ಲಿ ಮಂಕಿಫಾಕ್ಸ್ನ ಇತರ ಕ್ಲಾಡ್ಗಳ ಏಕಾಏಕಿ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಜನ ಜೀವ ಉಳಿಸಲು ಸಂಘಟಿತ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ಅತ್ಯಗತ್ಯ ಎಂಬುದು ಸ್ಪಷ್ಟವಾಗಿದೆ. ಆಫ್ರಿಕಾದಲ್ಲಿ ಏಕಾಏಕಿ ಮಂಕಿಫಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕೆಲಸ ಮಾಡುತ್ತಿದೆ. ಇದು ನಮ್ಮೆಲ್ಲರಿಗೂ ಕಾಳಜಿ ವಹಿಸಬೇಕಾದ ಎಚ್ಚರಿಕೆಯ ಘಂಟೆಯಾಗಿದೆ” ಎಂದು ಮಹಾನಿರ್ದೇಶಕರು ತಿಳಿಸಿದ್ದಾರೆ.
ರೋಗ ಲಕ್ಷಣಗಳೇನು? ಅಪಾಯಕಾರಿಯೇ? – ಮಂಕಿ ಪಾಕ್ಸ್ ವೈರಾಣು ತಗುಲಿದ ವ್ಯಕ್ತಿಗಳಲ್ಲಿ ಆರಂಭದಲ್ಲಿ ಸಾಮಾನ್ಯ ರೀತಿಯ ಜ್ವರದ ಮಾದರಿಯ ಲಕ್ಷಣಗಳು ಕಂಡುಬರುತ್ತವೆ. ಜ್ವರ, ಚಳಿ ಹಾಗೂ ಮೈ ಕೈ ನೋವು ಇರುತ್ತದೆ. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಹೋದರೆ ಸೋಂಕಿತರ ಮೈಯಲ್ಲಿ ಗುಳ್ಳೆಗಳು ಬೀಳುತ್ತವೆ. ಮುಖ, ಕೈ, ಎದೆ ಹಾಗೂ ಗುಪ್ತಾಂಗಗಳಲ್ಲಿ ಗುಳ್ಳೆಗಳು ಏಳುತ್ತವೆ. ತೀವ್ರ ತುರಿಕೆ ಕಂಡುಬರುತ್ತದೆ. ಸೂಕ್ತ ಚಿಕಿತ್ಸೆ ಸಿಗದೇ ಹೋದರೆ ಸಾವು ಸಂಭವಿಸುತ್ತದೆ. ಮಾರಣಾಂತಿಕ ಅಲ್ಲದಿದ್ದರೂ, ಸೋಂಕು ಹರಡುವ ವೇಗ ಹೆಚ್ಚಿರುವುದು ಮತ್ತು ಸಕಾಲದಲ್ಲಿ ಸೋಂಕು ಪತ್ತೆ ಆಗದಿರುವುದು ಸವಾಲಾಗಿ ಪರಿಣಮಿಸಿದೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ, ರೋಗ ಪತ್ತೆ ಮತ್ತು ಚಿಕಿತ್ಸೆ ಕಷ್ಟವಾಗುತ್ತದೆ. ಆಫ್ರಿಕಾ ರಾಷ್ಟ್ರಗಳ ಪೈಕಿ ಬುರುಂಡಿ, ಉಗಾಂಡ, ರವಾಂಡ, ಕೆನ್ಯಾ ದೇಶಗಳಲ್ಲಿ ಹೊಸತಾಗಿ ಸೋಂಕು ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ ಸೋಂಕಿಗೆ ಎದುರಾಗಿ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು ಈ ರಾಷ್ಟ್ರಗಳಿಗೆ ಪೂರೈಕೆ ಮಾಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post