ಮಂಗಳೂರು: ನಗರದ ವೆನ್‌ಲಾಕ್ ಆಸ್ಪತ್ರೆಯಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ತುರ್ತು ಚಿಕಿತ್ಸಾ ಘಟಕ(ಕ್ರಿಟಿಕಲ್ ಕೇರ್ ಯುನಿಟಿ) ನಿರ್ಮಾಣಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 56 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೆನ್‌ಲಾಕ್ ಜಿಲ್ಲಾಸ್ಪತ್ರೆಯ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಉದ್ಘಾಟನೆ ನೆರವೇರಿಸಿ, ಕಾಮಗಾರಿ ಶೀಗ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು. ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಆಧುನಿಕ ಆಸ್ಪತ್ರೆಯನ್ನು ಮೀರಿಸುವಂತಹ ಸೌಲಭ್ಯವನ್ನು ಹೊಂದಿದೆ. ಇದಕ್ಕೆ ಎಲ್ಲ ಸೌಕರ್ಯ ನೀಡಲಾಗಿದೆ.ಇದರ ನಿರ್ಮಾಣದಲ್ಲಿ ಎಲ್ಲರ ಕೊಡುಗೆ ಇದೆ. ಕೆಎಂಸಿಯಿಂದ ಆಸ್ಪತ್ರೆಯಿಂದ ದೊಡ್ಡ ಕೊಡುಗೆ ವೆನ್‌ಲಾಕ್ ಆಸ್ಪತ್ರಗೆ ಸಿಕ್ಕಿದೆ ಎಂದು ಹೇಳಿದರು. ಇದೀಗ 250 ಹಾಸಿಗೆಯ ನೂತನ ಸರ್ಜಿಕಲ್ ಬ್ಲಾಕ್ ಉನ್ನತ ಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ನೆರವಾಗಲಿದೆ ಎಂದರು.
ಆಸ್ಪತ್ರೆಯ ನೂತನ ಸರ್ಜಿಕಲ್ ಬ್ಲಾಕ್ ಒಟ್ಟು 7 ಅಂತಸ್ತುಗಳ ಕಟ್ಟಡ ಹೊಂದಿದ್ದು, 250 ಹಾಸಿಗೆಗಳ ಸೌಲಭ್ಯ ಹೊಂದಿದೆ. ಕಟ್ಟಡದ ತಳ ಅಂತಸ್ತಿನಲ್ಲಿ ಕ್ಯಾಥ್‌ಲ್ಯಾಬ್ ಮತ್ತು ರೇಡಿಯೋಲಜಿ ವಿಭಾಗಗಳಿವೆ. ನೆಲ ಅಂತಸ್ತಿನಲ್ಲಿ 15 ಹಾಸಿಗೆಗಳ ತುರ್ತು ಚಿಕಿತ್ಸಾ ವಿಭಾಗ, 8 ಹಾಸಿಗೆಗಳ ತುರ್ತು ಚಿಕಿತ್ಸಾ ಐಸಿಯು, ಎಂಡೋಸ್ಕೋಪಿ ಮತ್ತು ತುರ್ತು ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ಒಂದನೇ ಮಹಡಿಯಲ್ಲಿ 60 ಹಾಸಿಗೆಗಳ ಇ.ಎನ್.ಟಿ. ಮತ್ತು ಯುರಾಲಜಿ ಶಸ್ತ್ರಚಿಕಿತ್ಸಾ ವಾರ್ಡ್‌ಗಳು ಮತ್ತು ಎರಡನೇ ಮಹಡಿಯಲ್ಲಿ 70 ಹಾಸಿಗೆಗಳ ನ್ಯೂರೋ ಸರ್ಜರಿ, ಕಾರ್ಡಿಯೋಥೈರಾಸಿಕ್ ಸರ್ಜರಿ ಮತ್ತು ಕಣ್ಣಿನ ಶಸ್ತ್ರಚಿಕಿತ್ಸಾ ವಾರ್ಡ್ ಗಳಿವೆ. ಮೂರು ಮತ್ತು ನಾಲ್ಕನೇ ಅಂತಸ್ತಿನಲ್ಲಿ, ಪ್ರತಿ ಅಂತಸ್ತಿನಲ್ಲಿ 5 ರಂತೆ ಒಟ್ಟು 10 ಸುಸಜ್ಜಿತವಾದ ಶಸ್ತ್ರಚಿಕಿತ್ಸಾ ಕೊಠಡಿಗಳಿವೆ ಮತ್ತು ತಲಾ 10 ಹಾಸಿಗೆಗಳ ಶಸ್ತ್ರಚಿಕಿತ್ಸಾ ಪೂರ್ವ ಮತ್ತು 15 ಹಾಸಿಗೆಗಳ ಶಸ್ತ್ರಚಿಕಿತ್ಸಾ ನಂತರದ ವಾರ್ಡ್ ಲಭ್ಯವಿದೆ.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಮಂಗಳೂರು ನಗರಕ್ಕೆ ಮೆಡಿಕಲ್ ಕಾಲೇಜು ನೀಡುವಂತೆ ಸರಕಾರವನ್ನು ಆಗ್ರಹಿದರು. ಶಾಸಕ ವೇದ ವ್ಯಾಸ ಕಾಮತ್ ಸಮಾಂಭದ ಅಧ್ಯಕ್ಷತೆ ವಹಿಸಿದ್ದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಕೆ ಮಮತಾ ಡಿಎಸ್ ಗಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕೆ, ಮನಪಾ ಸದಸ್ಯ ಎ.ಸಿ. ವಿನಯ್‌ರಾಜ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಮನಪಾ ವಿಪಕ್ಷ ನಾಯಕನ ಪ್ರವೀಣ್ ಚಂದ್ರ ಆಳ್ವ, ಮಾಹೆ ಮಣಿಪಾಲ ಕುಲಪತಿ ಲೆ.ಜ.ಡಾ.ಎಂ.ಡಿ ವೆಂಕಟೀಶ್, ಕೆಎಂಸಿ ಡೀನ್ ಪ್ರೊ. ಬಿ. ಉಣ್ಣಿಕೃಷ್ಣನ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದ.ಕ. ಜಿ.ಪಂ ಸಿಇಒ ಡಾ. ಆನಂದ ಕೆ, ಮನಪಾ ಆಯುಕ್ತ ಆನಂದ್ ಸಿಎಲ್, ಡಿಎಚ್‌ಒ ಡಾ.ಎಚ್ ಆರ್ ತಿಮ್ಮಯ್ಯ, ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ರಾಜು.ಕೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ಕಾರ್ಯನಿರ್ವಾಹಕ ಚಂದ್ರಕಾಂತ್, ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ.ಕೆ.ಎಸ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post