ಮಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡ ಯುವತಿಯ ಕುಟುಂಬದವರು ಅಂಗಾಂಗ ದಾನ ಮಾಡಲು ನಿರ್ಧರಿಸಿ, ಇತರರ ಜೀವ ರಕ್ಷಣೆಗೆ ನೆರವಾಗಿದ್ದಾರೆ.
ಹಾವೇರಿ ಜಿಲ್ಲೆಯ ಹಲ್ಲೂರು ಗ್ರಾಮದ 23ರ ಹರೆಯದ ಕವನಾ ಎಂಬುವರು ಶಿವಮೊಗ್ಗ ಜಿಲ್ಲೆ ಹೊನ್ನಾಳಿ ಬಳಿ ರಸ್ತೆ ಅಪಘಾತಕ್ಕೀಡಾಗಿದ್ದರು. ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೆ.12ರಂದು ಎ.ಜೆ.ಆಸ್ಪತ್ರೆಗೆ ಕರೆ ತರಲಾಗಿತ್ತು. ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಕವನಾ ಅವರ ಮಿದುಳು ನಿಷ್ಕ್ರಿಯವಾಗಿತ್ತು. ಇದನ್ನು ತಿಳಿದ ಅವರ ಸಹೋದರಿ ಅಂಗಾಂಗ ದಾನಕ್ಕೆ ಮುಂದಾದರು. ರಾಜ್ಯ ಸರ್ಕಾರದಿಂದ ಸ್ಥಾಪಿತವಾದ ಮೃತ ದಾನಿ ಮಾನವ ಅಂಗಾಂಗಗಳ ಕಸಿ ಕಾರ್ಯಕ್ರಮದ ಅನುಷ್ಠಾನ ನೋಡಿಕೊಳ್ಳುವ ಜೀವನ ಸಾರ್ಥಕತೆ ಸಂಸ್ಥೆಗೆ ಈ ವಿಷಯ ತಿಳಿಸಲಾಯಿತು.
ದಾನಿಯ ಸಹೋದರಿ, ತಾಯಿ ಹಾಗೂ ಕುಟುಂಬದವರ ಒಪ್ಪಿಗೆ ಪಡೆದು ಅಂಗಾಂಗ ದಾನ ಪ್ರಕ್ರಿಯೆ ಆರಂಭಿಸಲಾಯಿತು. ಜೀವನ ಸಾರ್ಥಕತೆ ಸಂಸ್ಥೆಯ ನಿರ್ದೇಶನದಂತೆ ಒಂದು ಕಿಡ್ನಿಯನ್ನು ಎ.ಜೆ ಆಸ್ಪತ್ರೆಯಲ್ಲಿ ಕಸಿ ಮಾಡಲಾಯಿತು. ಲಿವರ್ ಹಾಗೂ ಹೃದಯವನ್ನು ಎ.ಜೆ. ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿನ ಎರಡು ಆಸ್ಪತ್ರೆಗಳಿಗೆ ಹಾಗೂ ಒಂದು ಕಿಡ್ನಿ, ಕಣ್ಣು ಮತ್ತು ಚರ್ಮವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post