ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಾಲ್, ಸಿನಿಮಾಗಳಿಗೆ ಹೋಗಬೇಕಾದರೆ ಕೋವಿಡ್ ನಿರ್ಬಂಧಕ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು. ಲಸಿಕೆ ಹಾಕಿಸದವರು ಮಾಲ್, ಸಿನಿಮಾ ಥಿಯೇಟರ್ ಪ್ರವೇಶಿಸುವಂತಿಲ್ಲ.
ಇಂತಹ ಕಠಿಣ ಕ್ರಮವನ್ನು ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಲಸಿಕೆ ಹಾಕದೆ ಓಡಾಡುವವರ ಮೇಲೆ ಅಧಿಕಾರಿಗಳು ನಿಗಾ ವಹಿಸಿ, ಕ್ರಮ ಕೈಗೊಳ್ಳಲಿದ್ದಾರೆ.
ಆರಂಭದಲ್ಲಿ ತಪ್ಪು ಗ್ರಹಿಕೆಯಿಂದ ಜನರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಕೋವಿಡ್-19 ಎರಡನೇ ಅಲೆ ಸಂದರ್ಭ ಹೆಚ್ಚಿನ ಜನರು ಸ್ವಯಂಸ್ಫೂರ್ತಿಯಿಂದ ಲಸಿಕೆ ಹಾಕಿಸಿಕೊಂಡಿದ್ದಾರೆ. ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುತುವರ್ಜಿಯಿಂದ ಸಾಕಷ್ಟು ಶಿಬಿರಗಳನ್ನು ಏರ್ಪಡಿಸಿ, ಲಸಿಕೆ ಕೊಡಿಸಲಾಗಿದೆ. ಹಲವು ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಲಸಿಕೆ ಕಡ್ಡಾಯ ಮಾಡಿದ್ದರು.
ಈ ಎಲ್ಲ ಕ್ರಮಗಳಿಂದ ಮತ್ತು ಅಧಿಕಾರಿಗಳಿಗೆ ಗುರಿ ನಿಗದಿ ಮಾಡಿದ್ದರಿಂದ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಸಿದ್ದರಿಂದ ಸಾಕಷ್ಟು ಪ್ರಗತಿ ಸಾಧನೆಯಾಗಿದೆ. ಆದರೆ ಇನ್ನೂ ಕೆಲವರು ನಿರಾಸಕ್ತಿ ತೋರುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಅ.16ರಂದು ಮಾಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಪಡೆದ ದಾಖಲೆ ಇಲ್ಲದೆ, ಬೇಕಾಬಿಟ್ಟಿ ಓಡಾಡುವವರನ್ನು ಅಧಿಕಾರಿಗಳು ವಿಚಾರಿಸಲಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post