ಉಳ್ಳಾಲ, ಜ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಡಹಗಲೇ ಐದು ಮಂದಿ ಆಗಂತುಕರ ತಂಡ ಫಿಯೆಟ್ ಕಾರಿನಲ್ಲಿ ಬಂದು ಬಂದೂಕು ತೋರಿಸಿ ಬ್ಯಾಂಕ್ ದರೋಡೆ ಮಾಡಿದೆ. ಉಳ್ಳಾಲ ತಾಲೂಕಿನ ಕೆ.ಸಿ.ರೋಡ್ ಶಾಕೆಯ ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿದೆ. ಹಾಡಹಗಲೇ 5 ಮಂದಿ ಆಗಂತುಕರು ಬ್ಯಾಂಕ್‌ಗೆ ನುಗ್ಗಿ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನ ಒಡವೆ, ನಗದುಗಳೆಲ್ಲವನ್ನೂ ದೋಚಿಕೊಂಡು ಹೋಗಿದ್ದಾರೆ. ಚಿನ್ನ ಹಾಗೂ ನಗದು ಸೇರಿದಂತೆ ಬರೋಬ್ಬರಿ 10ರಿಂದ 12 ಕೋಟಿ ರೂ ಹಣ ಎಗರಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಇದೇ ಬ್ಯಾಂಕ್‌ನಲ್ಲಿ ಈ ಹಿಂದೆಯೂ ಸಹ ಕಳ್ಳತನವಾಗಿತ್ತು.
ಪೊಲೀಸ್ ಕಮಿಷನರ್ ಹೇಳಿದ್ದೇನು?: ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, “ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು, ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಕಪಾಟನ್ನು ತೆರೆಸಿ, ದರೋಡೆ ಮಾಡಿದ್ದಾರೆ. ಕದ್ದ ವಸ್ತುಗಳ ಮೌಲ್ಯ ಸುಮಾರು 10 ರಿಂದ 12 ಕೋಟಿಗಳಷ್ಟಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಆದರೂ ವಿವರವಾದ ಮೌಲ್ಯಮಾಪನಗಳು ನಡೆಯುತ್ತಿವೆ” ಎಂದು ತಿಳಿಸಿದ್ದಾರೆ.
“ಅಪರಾಧಿಗಳು ಕಪ್ಪು ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಹಿಂದಿ, ಕನ್ನಡ ಮಾತನಾಡುತ್ತಿದ್ದ ದರೋಡೆಕೋರರು: ಬ್ಯಾಂಕ್ ಸಿಬ್ಬಂದಿ ಬೊಬ್ಬೆ ಕೇಳಿ ಕೆಳಭಾಗದಲ್ಲಿದ್ದ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿರುವ ಬ್ಯಾಂಕಿನತ್ತ ದೌಡಾಯಿಸಿದ್ದರು. ದರೋಡೆಕೋರರು ಈ ವೇಳೆಯೂ ವಿದ್ಯಾರ್ಥಿಗಳಿಗೆ ವಾಪಸ್ ಹೋಗುವಂತೆ ಬೆದರಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಆಗಂತುಕರು ಕನ್ನಡದಲ್ಲಿ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಜೊತೆ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾರೆ.
ಎಸಿಪಿ ಧನ್ಯ ನಾಯಕ್ ನೇತೃತ್ವದ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಥಳಕ್ಕೆ ಸ್ಪೀಕರ್ ಖಾದರ್ ಭೇಟಿ ನೀಡಿ ಆರೋಪಿಗಳನ್ನ ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ವಿಶೇಷ ಅಂದ್ರೆ, ಬ್ಯಾಂಕ್ ಒಳಗಿನ ಸಿಸಿಟಿವಿ ಕ್ಯಾಮೆರಾವನ್ನು ಸರ್ವಿಸ್ ಮಾಡುತ್ತಿದ್ದ ವೇಳೆಯೇ ಘಟನೆ ನಡೆದಿದೆ. ಹೊರಗಿನ ಕ್ಯಾಮೆರಾದಲ್ಲಿ ಆರೋಪಿಗಳು ಪಲಾಯನಗೈಯುತ್ತಿರುವ ದೃಶ್ಯ ಸೆರೆಯಾಗಿದೆ. ಹೀಗಾಗಿ ಬ್ಯಾಂಕ್ ಬಗ್ಗೆ ತಿಳಿದಿರುವ ಮಂದಿಯೇ ದರೋಡೆ ನಡೆಸಿರುವಂತೆ ಕಂಡುಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post