ಉಡುಪಿ: ಹಿಜಾಬ್ ಸಂಘರ್ಷ ತೀವ್ರವಾಗುತ್ತಿದ್ದು, ಪದವಿಪೂರ್ವ ಕಾಲೇಜುಗಳಿಂದ ಪದವಿ ಕಾಲೇಜಿಗೂ ಸಂಘರ್ಷದ ಕಿಡಿ ವಿಸ್ತರಿಸಿದೆ. ಬುಧವಾರ ಅಜ್ಜರಕಾಡಿನಲ್ಲಿರುವ ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ (ಪದವಿ) ಕಾಲೇಜಿನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಬೆಳಿಗ್ಗೆ ಕಾಲೇಜಿಗೆ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಬಿಚ್ಚಿಟ್ಟು ತರಗತಿ ಪ್ರವೇಶಿಸುವಂತೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಸೂಚನೆ ನೀಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ 40 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಪಟ್ಟು ಹಿಡಿದರು. ಹೈಕೋರ್ಟ್ ಮಧ್ಯಂತರ ಆದೇಶ ಪಾಲನೆ ಮಾಡಬೇಕಿದ್ದು, ತರಗತಿಯಲ್ಲಿ ಹಿಜಾಬ್ ಧರಿಸಲು ಅನುಮತಿ ಇಲ್ಲ ಎಂದು ಪ್ರಾಂಶುಪಾಲರು ವಿದ್ಯಾರ್ಥಿನಿಯರ ಮನವೊಲಿಸಲು ಪ್ರಯತ್ನಿಸಿದರು.
ಪಟ್ಟು ಸಡಿಲಿಸದ ಹಲವು ವಿದ್ಯಾರ್ಥಿನಿಯರು ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಅಂತಿಮ ತೀರ್ಪು ಬರುವವರೆಗೂ ಕಾಲೇಜಿಗೆ ಬರುವುದಿಲ್ಲ ಎಂದು ಮನೆಗೆ ಹೊರಟರು. ಹಿಜಾಬ್ ಬಿಚ್ಚದ ಕೆಲವು ವಿದ್ಯಾರ್ಥಿನಿಯರನ್ನು ವಿಶ್ರಾಂತಿ ಕೊಠಡಿಯಲ್ಲಿ ಕೂರಿಸಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿನಿಯರ ಪೋಷಕರು ಕಾಲೇಜಿಗೆ ಭೇಟಿ ನೀಡಿ ಅಸಮಾಧಾನ ವ್ಯಕ್ತಪಡಿಸಿದರು.
ದಾಖಲಾತಿ ವೇಳೆ ಸ್ಕಾರ್ಫ್ ಧರಿಸಲು ಅನುಮತಿ ನೀಡಿದ್ದ ಕಾಲೇಜು ಆಡಳಿತ ಮಂಡಳಿ ಈಗ ಏಕಾಏಕಿ ನಿರಾಕರಿಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಪೋಷಕರು ಮಕ್ಕಳನ್ನು ತಮ್ಮೊಂದಿಗೆ ಮನೆಗೆ ಕರೆದೊಯ್ದರು.
ಮಧ್ಯಂತರ ಆದೇಶದಲ್ಲಿ ಗೊಂದಲಗಳಿದ್ದು, ಪದವಿಪೂರ್ವ ಕಾಲೇಜುಗಳಲ್ಲಿ ಮಾತ್ರ ಹಿಜಾಬ್‌ಗೆ ನಿರ್ಬಂಧವಿದೆ. ಪದವಿ ಕಾಲೇಜುಗಳಿಗೆ ಆದೇಶ ಅನ್ವಯವಾಗುವುದಿಲ್ಲ. ಹಿಜಾಬ್ ನಮ್ಮ ಧಾರ್ಮಿಕ ಹಕ್ಕು, ಧರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಕಾಲೇಜು ಪ್ರಾಂಶುಪಾಲರು ಬಲವಂತವಾಗಿ ತರಗತಿಯಿಂದ ಹೊರಹಾಕಿಲ್ಲ. ನ್ಯಾಯಾಲಯದ ಆದೇಶ ಪಾಲಿಸುವಂತೆ ತಿಳಿಸಿದರು. ಹಿಜಾಬ್ ಕಳಚಲು ಮನಸ್ಸಿಲ್ಲದ ಕಾರಣ ತರಗತಿಯಿಂದ ಹೊರಬಂದಿದ್ದೇವೆ. ನ್ಯಾಯಾಲಯದಲ್ಲಿ ಹಿಜಾಬ್ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಅಲ್ಲಿಯರವರೆಗೂ ಕಾಯುತ್ತೇವೆ ಎಂದು ಹಲವು ವಿದ್ಯಾರ್ಥಿನಿಯರು ಹೇಳಿದರು.
ಆರಂಭದಿಂದಲೂ ಹಿಜಾಬ್ ಹಾಕುತ್ತಿದ್ದೇವೆ. ಏಕಾಏಕಿ ಹಿಜಾಬ್ ಹಾಕುವಂತಿಲ್ಲ ಎಂದಾಗ ಮನಸ್ಸಿಗೆ ನೋವಾಗಿದೆ. ಕಾಲೇಜಿನಲ್ಲಿ ಸಾಮರಸ್ಯದ ವಾತಾವರಣ ಹಾಳಾಗುತ್ತಿದೆ. ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉನ್ನತ ಹುದ್ದೆ ಪಡೆಯುವ ಗುರಿ ಇದ್ದು, ಹಿಜಾಬ್ ವಿವಾದದಿಂದ ಭವಿಷ್ಯದ ಮೇಲೆ ಕತ್ತಲು ಆವರಿಸಿದಂತಾಗಿದೆ ಎಂದು ಹಲವು ವಿದ್ಯಾರ್ಥಿನಿಯರು ಬೇಸರ ಹೊರ ಹಾಕಿದರು.
ಎಲ್ಲ ಧರ್ಮದವರೊಟ್ಟಿಗೆ ಬೆರೆತು ವಿದ್ಯಾಭ್ಯಾಸ ಕಲಿಯುವಂತಹ ವಾತಾವರಣ ಇರಬೇಕು. ಹಿಜಾಬ್ ಹೆಸರಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ವೈಮನಸ್ಸು ಮೂಡಿಸುವ ಕೆಲಸ ಮಾಡಬಾರದು ಎಂದು ಅಸಮಾಧಾನ ತೋಡಿಕೊಂಡರು.
Discover more from Coastal Times Kannada
Subscribe to get the latest posts sent to your email.
Discussion about this post