ಬೆಳ್ತಂಗಡಿ: ನನ್ನ ಅಮ್ಮನ ‘ಹೊಟ್ಟೆಯಲ್ಲಿ ಗಡ್ಡೆ ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅಮ್ಮನ ಪ್ರಾಣ ಉಳಿಸಲು ನೆರವಾಗಿ’ ಎಂದು ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿರುವ 11ರ ಹರೆಯದ ಬಾಲಕಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ಬೆಳ್ತಂಗಡಿ ತಾಲ್ಲೂಕಿನ ಕಣಿಯೂರು ಗ್ರಾಮದ ಕೊರಜಂಡ ಮನೆ ನಿವಾಸಿ ದಿ.ವಾಸಪ್ಪ ಎಂಬುವರ ಪುತ್ರಿ ವಿತೀತಾ ಈ ರೀತಿ ಪತ್ರ ಬರೆದು, ಸಹಾಯಯಾಚಿಸಿದ್ದಾಳೆ.
‘ನಾನು ನನ್ನ ತಂದೆಯನ್ನು ಹಲವು ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದೇನೆ. ನಾನು ಕಣಿಯೂರು ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದರೆ, ನನ್ನ ಸಹೋದರ 2ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನನ್ನ ಅಮ್ಮ ಪದ್ಮುಂಜ ಪ್ರೌಢಶಾಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ದುಡಿದು ನಮ್ಮನ್ನು ಸಾಕುತ್ತಿದ್ದರು. ಇದ್ದಕ್ಕಿದ್ದಂತೆ ಅವರಿಗೆ ಹೊಟ್ಟೆಯೊಳಗೆ ನೋವು ಕಾಣಿಸಿಕೊಂಡಾಗ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಅದು ಗಡ್ಡೆ ಕ್ಯಾನ್ಸರ್ ಎಂದು ತಿಳಿಯಿತು. ಎಲ್ಲೆಲ್ಲಿಂದಲೂ ಹಣ ಒಟ್ಟುಗೂಡಿಸಿ ₹ 3-4 ಲಕ್ಷ ವ್ಯಯಿಸಿ ಚಿಕಿತ್ಸೆ ಮಾಡಲಾಯಿತು. ಇದೀಗ ಮತ್ತೆ ರೋಗ ಉಲ್ಬಣಿಸಿ ಅಮ್ಮ ಹಾಸಿಗೆ ಹಿಡಿದಿದ್ದಾರೆ’ ಎಂದು ಪತ್ರದಲ್ಲಿ ಬರೆದಿದ್ದಾಳೆ.
‘ಇದೀಗ ಮತ್ತೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ. ಅದಕ್ಕೆ ಇನ್ನೂ ₹ 4ರಿಂದ ₹5 ಲಕ್ಷ ಬೇಕಿದೆ ಎಂದಿದ್ದಾರೆ. ಆದ್ದರಿಂದ ಡಿಎಸ್‌ಎಸ್ ಸಂಘಟನೆ ಮತ್ತು ಸಾರ್ವಜನಿಕರು ನೆರವಾಗಬೇಕು’ ಎಂದು ಭಿನ್ನವಿಸಿಕೊಂಡಿದ್ದಾಳೆ.
ನೆರವು ನೀಡುವವರು ವಿನಯ ಅವರ ಕೆನರಾ ಬ್ಯಾಂಕ್‌ನ ಪದ್ಮುಂಜ ಶಾಖೆಯಲ್ಲಿರುವ ಉಳಿತಾಯ ಖಾತೆ ಸಂಖ್ಯೆ 1599101010052 (IFSC CODE : CNRB 0001599) ಬಳಸಬಹುದು. ಸಂಪರ್ಕಕ್ಕೆ– 7760422885.
Discover more from Coastal Times Kannada
Subscribe to get the latest posts sent to your email.
Discussion about this post