ಮಂಗಳೂರು, ಫೆ 17: ಜನವರಿ 03 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶ ಎಂಬಲ್ಲಿ ಸಿಂಗಾರಿ ಬೀಡಿ ಉದ್ಯಮಿ ಮನೆಗೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು ಸುಮಾರು 30 ಲಕ್ಷ ರೂ. ನಗದು ದೋಚಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಈ ಪ್ರಕರಣದ ಮಾಸ್ಟರ್ ಮೈಂಡ್ ಕೇರಳದ ಪೊಲೀಸ್ ಅಧಿಕಾರಿ ಎಂಬುದು ಗೊತ್ತಾಗಿದೆ. ತನಿಖಾ ತಂಡವು ಈಗಾಗಲೇ ಕೇರಳದ ಕೊಲ್ಲಂ ನಿವಾಸಿಗಳಾದ ಅನಿಲ್ ಫರ್ನಾಂಡಿಸ್ (49), ಸಚ್ಚಿನ್ ಟಿ ಎಸ್ (29) ಹಾಗೂ ಶಬಿನ್ ಎಸ್ (27) ಎಂಬವರನ್ನು ಬಂಧಿಸಿತ್ತು. ಬಳಿಕ ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳಿಯ ಆರೋಪಿ ಕೊಳ್ನಾಡು ಬಂಟ್ವಾಳ ನಿವಾಸಿ ಸಿರಾಜುದ್ದೀನ್ (37) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆತ ನೀಡಿದ ಮಾಹಿತಿಯ ಅಧಾರದಲ್ಲಿ ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್ (38) ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್ (27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ಕೃತ್ಯಕ್ಕೆ ಮೂಲ ಸೂತ್ರದಾರನಾದ ಕೇರಳದ ಶಫೀರ್ ಬಾಬು (48) ಎಂಬಾತನನ್ನು ಬಂಧಿಸಿದ್ದಾರೆ. ಶಫೀರ್ ಬಾಬು ಕೇರಳದ ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕನಾಗಿದ್ದಾನೆ. ತ್ರಿಶೂರ್ ಜಿಲ್ಲಾ ಎಸ್ಪಿಯ ಅನುಮತಿಯೊಂದಿಗೆ ಶನಿವಾರ ಮಧ್ಯಾಹ್ನ ಪೊಲೀಸ್ ಕ್ವಾರ್ಟರ್ಸ್ನಿಂದ ಆರೋಪಿ ಶಫೀರ್ ಬಾಬುನನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಟ್ಲ ಪೊಲೀಸ್ ಠಾಣೆಗೆ ಕರೆದು ತರಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜುದ್ದೀನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಮೊಹಮ್ಮದ್ ಇಕ್ಬಾಲ್ ಹಾಗೂ ಮೊಹಮ್ಮದ್ ಅನ್ಸಾರ್ ಎಂಬವರನ್ನು ಬಂಧಿಸಲಾಯಿತು. ಆ ಬಳಿಕ, ಕೇರಳದ ಎಎಸ್ಐ ಶಫೀರ್ ಬಾಬುನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ನಮ್ಮ ಪರಿಣಿತ ಪೊಲೀಸರ ನಾಲ್ಕು ತಂಡಗಳು ಕೇರಳದ ಕೊಲ್ಲಂ ಸೇರಿ ವಿವಿಧ ಕಡೆ ಸತತ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದೆ. ಕೇರಳ ಪೊಲೀಸ್ ಅಧಿಕಾರಿ ಈ ಪ್ರಕರಣದ ಕಿಂಗ್ ಪಿನ್ ಆಗಿದ್ದಾನೆ. ಅರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾಹಿತಿ ನೀಡಿದ್ದಾರೆ.
ಇಡಿ ಹೆಸರಿನಲ್ಲಿ ನಡೆದಿದ್ದ ನಕಲಿ ದಾಳಿ ವೇಳೆ ದೋಚಿದ್ದ 30 ಲಕ್ಷ ರೂಪಾಯಿ ನಗದಿನ ಹೆಚ್ಚಿನ ಪಾಲು ಪೊಲೀಸ್ ಅಧಿಕಾರಿಯಾದ ಎಎಸ್ಐ ಶಫೀರ್ ಬಾಬುಗೆ ಹೋಗಿದೆ. ಆದರೆ, ಆತನ ಬಳಿ ಪೊಲೀಸರಿಗೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ. ಎಲ್ಲಾ ಹಣವನ್ನು ಸಾಲ ತೀರಿಸಿದ್ದಾಗಿ ಆತ ಪೊಲೀಸರ ಬಳಿ ಹೇಳಿದ್ದಾನಂತೆ. ಇನ್ನು ಸಿಂಗಾರಿ ಬೀಡಿ ಮಾಲೀಕ ಸುಲೈಮನ್ ಹಾಜಿ ಜೊತೆ ಕೆಲಸ ಮಾಡುತ್ತಿದ್ದವರೇ ನೀಡಿದ ಮಾಹಿತಿ ಮೇರೆಗೆ ಈ ನಕಲಿ ದಾಳಿ ಮಾಡಲಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ತನಿಖೆ ಇನ್ನು ಕೂಡ ಮುಂದುವರೆದಿದ್ದು ಇನ್ನಷ್ಟು ವಿಚಾಗಳು ಬಯಲಾಗಲಿವೆ.
Discover more from Coastal Times Kannada
Subscribe to get the latest posts sent to your email.
Discussion about this post