ಬೆಂಗಳೂರು: ಐತಿಹಾಸಿಕ ಧರ್ಮರಾಯ ಸ್ವಾಮಿ ಕರಗ ಉತ್ಸವ ಭಾನುವಾರ ನಸುಕಿನ ಜಾವ ವಿಜೃಂಭಣೆಯಿಂದ ನಡೆಯಿತು. ತವಕ್ಕಲ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯವನ್ನು ಪಾಲಿಸುವ ಮೂಲಕ ಈ ಹಬ್ಬವು ‘ನಾಡಿನ ಭಾವೈಕ್ಯಕ್ಕೆ ಧಕ್ಕೆ ತರುವ ತಂತ್ರಗಳು ಫಲಿಸುವುದಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಸಾರಿತು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಕರಗವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಮತ್ತೆ ಕಳೆಗಟ್ಟಿದ ಉತ್ಸವ ಹಳೆ ವೈಭವಕ್ಕೆ ಮರಳಿತು.
ಪರಂಪರಾನುಗತವಾಗಿ ಭೇಟಿ ನೀಡುತ್ತಿದ್ದ ಪ್ರದೇಶಗಳಿಲ್ಲೆಲ್ಲ ಕರಗ ಸಾಗಿತು. ಈ ಬಾರಿಯೂ ಚಿಕ್ಕಪೇಟೆಯ ಅಕ್ಕಿಪೇಟೆ ಮುಖ್ಯರಸ್ತೆಯ ಹಜ್ರತ್ ತವಕ್ಕಲ್ ಶಾ ಮಸ್ತಾನ್ ಸೋಹರ್ವಾರ್ಡಿ ರಹಮತುಲ್ಲಾ ದರ್ಗಾಕ್ಕೆ ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಕರಗ ಪ್ರವೇಶಿಸುವ ಮೂಲಕ ಈ ಪರಂಪರೆಗೆ ತಗಾದೆ ತೆಗೆದ ಟೀಕಾಕಾರರಿಗೆ ಉತ್ತರ ನೀಡಿತು. ದರ್ಗಾದಲ್ಲಿ ಮುಸ್ಲಿಂ ಸಮುದಾಯದವರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಭಕ್ತಾದಿಗಳಿಗೆ ಸಿಹಿ ತಿಂಡಿ, ನೀರು, ಹಣ್ಣುಗಳನ್ನು ನೀಡಿ ಸ್ವಾಗತಿಸಿದರು.
ಕರಗ ನೋಡಲು ದರ್ಗಾ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಜಮಾಯಿಸಿದ್ದರು. ದರ್ಗಾದಲ್ಲಿ ಸೇರಿದ್ದವರು ‘ಗೋವಿಂದಾ ಗೋವಿಂದಾ…’ ಎಂದು ಕೂಗಿ ಕರಗದ ಸಂಭ್ರಮ ಹೆಚ್ಚಿಸಿದರು.
‘ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಇದು. ಬೆಂಗಳೂರು ಕರಗ ಕರ್ನಾಟಕದ ದೊಡ್ಡ ಹಬ್ಬ. ಶಾಂತಿಯುತವಾಗಿ ಸಹೋದರ ಭಾವನೆಯಿಂದ ಎಲ್ಲ ಕಾರ್ಯಗಳು ನಡೆದಿವೆ. ಈ ಬಾರಿ ರಂಜಾನ್ ಮತ್ತು ಕರಗ ಒಟ್ಟಿಗೆ ಬಂದಿವೆ. ಹಿಂದೂ–ಮುಸ್ಲಿಮರು ಒಗ್ಗಟ್ಟಿನಿಂದ ಇರಬೇಕು. ಈ ಹಬ್ಬವು ಕೋಮು ಸಾಮರಸ್ಯದ ಸಂಕೇತ. ಸಂಪ್ರದಾಯದ ಪ್ರಕಾರ ಎಲ್ಲವೂ ಒಳ್ಳೆಯ ರೀತಿಯಲ್ಲಿ ನಡೆದಿದೆ. ದರ್ಗಾ ಸುತ್ತಲೂ ಮೂರು ಸುತ್ತು ಕರಗ ಪ್ರದಕ್ಷಿಣೆ ಹಾಕಿತು. ಕೆಲವರು ಕರಗ ಬರುವುದಿಲ್ಲ ಎಂದು ಹೇಳುತ್ತಿದ್ದರು. ಅದೆಲ್ಲವೂ ರಾಜಕೀಯ ಅಷ್ಟೇ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಗಾ ಕಾರ್ಯದರ್ಶಿ ಮಹಮ್ಮದ್ ಇನಾಯತ್ ಉಲ್ಲಾ ಹೇಳಿದರು.
ಕಬ್ಬನ್‍ಪೇಟೆ, ಆಂಜನೇಯ ಸ್ವಾಮಿ ದೇವಸ್ಥಾನ, ಗಣೇಶ ದೇವಸ್ಥಾನ, ಕಾಟನ್ ಪೇಟೆ, ಬಳೇ ಪೇಟೆ ಸರ್ಕಲ್, ಅಣ್ಣಮ್ಮ ದೇವಸ್ಥಾನ, ಕುಂಬಾರ ಪೇಟೆ, ಚೌಡೇಶ್ವರಿ ದೇವಸ್ಥಾನ, ತಿಗಳರ ಪೇಟೆ ಮೂಲಕ ದೇವಸ್ಥಾನಕ್ಕೆ ದ್ರೌಪದಿ ಕರಗ ಹಿಂತಿರುಗಿತು. ಕರಗ ಸಾಗುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post