ಮಂಗಳೂರು: ನಗರದ ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ʼಪ್ರಜಾ ಸೌಧʼ ಶುಕ್ರವಾರ ಸಿ ಎಂ .ಸಿದ್ದರಾಮಯ್ಯ ಉದ್ಘಾಟಿಸಿ ಅವರು ಮಾತನಾಡಿದರು. ಹತ್ತು ವರ್ಷಗಳ ಹಿಂದೆ ತಾವೇ ಗುದ್ದಲಿ ಪೂಜೆ ಮಾಡಿದ್ದ ಕಟ್ಟಡವನ್ನು ಈಗ ತಾವೇ ಉದ್ಘಾಟಿಸುತ್ತಿರುವುದಾಗಿ ಹೇಳಿದ ಅವರು, ತಾವು ಗುದ್ದಲಿ ಪೂಜೆ ಮಾಡಿದ ನಂತರ ಬಿಜೆಪಿಯೂ ಆಡಳಿತ ನಡೆಸಿದೆ. ಅವರೇಕೆ ಈ ಕಟ್ಟಡವನ್ನು ಬೇಗ ನಿರ್ಮಿಸಿ ಉದ್ಘಾಟಿಸಲಿಲ್ಲ ಎಂದು ಪ್ರಶ್ನಿಸಿದರು. ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯಾಗಿಸುವುದಾಗಿ ಅವರು ತಿಳಿಸಿದರು.
ರಾಜ್ಯದ ಎಲ್ಲರಿಗೂ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಜತೆಗೆ ಸರ್ವರೂ ನೆಮ್ಮದಿಯಿಂದ ಬದುಕುವ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸಬೇಕಿದೆ ಎಂದರು. ಶಿಕ್ಷಣದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಬುದ್ಧಿವಂತರು, ವಿದ್ಯಾವಂತರು ಇಲ್ಲಿದ್ದಾರೆ. ಹೀಗಾಗಿ ಈ ನೆಲ ಶಾಂತಿಯ ತೋಟವಾಗಬೇಕಿದೆ. ಯಾವುದೇ ಕಾರಣಕ್ಕೂ ಕೋಮುಗಲಭೆ ನಡೆ ಯಬಾರದು. ಅದಕ್ಕಾಗಿ ಎಲ್ಲಾ ರಾಜಕಾ ರಣಿಗಳು ಶ್ರಮಿಸಬೇಕಿದೆ. ಎಲ್ಲರೂ ಭಾತೃತ್ವದಿಂದ ಸಹಬಾಳ್ವೆ ನಡೆಸುವ ಮನೋಭಾವ ಬೆಳೆಸೋಣ ಎಂದರು. ಬಾಗಲಕೋಟೆ, ದಕ್ಷಿಣ ಕನ್ನಡ, ಕೋಲಾರದಲ್ಲಿ ಈ ಬಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ನಿರ್ಧರಿಸಿದ್ದೇವೆ. ಈ ಪೈಕಿ ಶಾಸಕ ಅಶೋಕ್ ಕುಮಾರ್ ರೈ ಅವರ ಒತ್ತಾಯಕ್ಕಾಗಿ ಪುತ್ತೂರಿನಲ್ಲಿ 250 ಬೆಡ್‌ನ ಮೆಡಿಕಲ್ ಕಾಲೇಜು ಪ್ರಾರಂಭಿಸಲಿದ್ದೇವೆ ಎಂದರು.
“ಪ್ರಜಾಸೌಧ’; ಒಂದೇ ಸೂರಿನಡಿ ಎಲ್ಲಾ ಕಚೇರಿ : ದ.ಕ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ 42 ಇಲಾಖೆಗಳ ಕಚೇರಿಗಳು “ಪ್ರಜಾ ಸೌಧ’ದ ಒಂದೇ ಸೂರಿನಡಿ ಲಭ್ಯವಾಗಲಿವೆ. ಜಿಲ್ಲಾಧಿಕಾರಿ ಕೊಠಡಿ, ಜಿಲ್ಲಾಧಿಕಾರಿಗಳ ನ್ಯಾಯಾಲಯ, ಕಂದಾಯ ಶಾಖೆ, ಅಪರ ಜಿಲ್ಲಾಧಿಕಾರಿಗಳ ಕಚೇರಿ/ನ್ಯಾಯಾಲಯ, ಆಡಳಿತ ಶಾಖೆ, ಟಪ್ಪಾಲು ಶಾಖೆ, ಭೂಮಾಪನ ಇಲಾಖೆ, ಸಭಾಂಗಣ, ಚುನಾವಣೆ ಶಾಖೆ, ಧಾರ್ಮಿಕ ದತ್ತಿ ಶಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರ ವಸತಿ ಶಾಖೆ, ರಾಷ್ಟ್ರೀಯ ಹೆದ್ದಾರಿ ಆರ್ಬಿಟೇಶನ್ ಶಾಖೆ, ವೀಡಿಯೋ ಕಾನ್ಫರೆನ್ಸ್ ಕೊಠಡಿ, ಸ್ಪಂದನ ಕೇಂದ್ರ/ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ದತ್ತು ಮಕ್ಕಳ ಮಾರ್ಗದರ್ಶನ ಕೇಂದ್ರ, ಪಹಣಿ (ಆರ್‌ಟಿಸಿ) ವಿತರಣೆ/ ಅಟಲ್ ಜೀ ಜನಸ್ನೇಹಿ ಕೇಂದ್ರ, ಆಧಾರ್ ನೋಂದಣಿ, ಆಹಾರ ನಾಗರಿಕ ಪೂರೈಕೆ ಇಲಾಖೆ, ಪಡಿತರ ಚೀಟಿ ಶಾಖೆ, ಸಹಾಯಕ ನಿರ್ದೇಶಕರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಜಿಲ್ಲಾ ಖಜಾನೆ “ಪ್ರಜಾಸೌಧ’ದಲ್ಲಿ ಕಾರ್ಯನಿರ್ವಹಿಸಲಿದೆ.
ಈ ವೇಳೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕಂದಾಯ ಸಚಿವ ಕೃಷ್ಣಭೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ವೇದವ್ಯಾಸ ಕಾಮತ್, ಅಶೋಕ್ ರೈ, ಸಂಸದ ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post