ಮಂಗಳೂರು, ಸೆ.16: ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಮಸೀದಿಗೆ ಕಲ್ಲು ತೂರಿದ ಪ್ರಕರಣ ಸಂಬಂಧಿಸಿ ಸುರತ್ಕಲ್ ಪೊಲೀಸರು ಆರು ಮಂದಿ ಆರೋಪಿಗಳನ್ನು ಮಿಂಚಿನ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಕಾಟಿಪಳ್ಳದ ಮೂರನೇ ಬ್ಲಾಕ್ ವ್ಯಾಪ್ತಿಯ ಜುಮ್ಮಾ ಮಸೀದಿಗೆ ನಿನ್ನೆ ತಡರಾತ್ರಿ ಬೈಕಿನಲ್ಲಿ ಬಂದ ಯುವಕರು ಕಲ್ಲು ತೂರಾಟ ನಡೆಸಿದ್ದರು. ಕಾಟಿಪಳ್ಳ ಆಶ್ರಯ ಕಾಲನಿಯ ಭರತ್ ಶೆಟ್ಟಿ(26), ಅದೇ ಪ್ರದೇಶದ ನಿವಾಸಿ ಚೆನ್ನಪ್ಪ ಶಿವಾನಂದ ಚಲವಾದಿ(19), ಸುರತ್ಕಲ್ ಚೇಳಾರು ಗ್ರಾಮದ ನಿತಿನ್ ಹಡಪ(22), ಕೊಡಿಪಾಡಿ ಮುಂಚೂರು ನಿವಾಸಿ ಸುಜಿತ್ ಶೆಟ್ಟಿ(23), ಹೊಸಬೆಟ್ಟು ಗ್ರಾಮದ ಅಣ್ಣಪ್ಪ ಅಲಿಯಾಸ್ ಮನು(24) ಮತ್ತು ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಪ್ರೀತಮ್ ಶೆಟ್ಟಿ(34) ಬಂಧಿತರು.
ಭರತ್ ಸುರತ್ಕಲ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈ ಹಿಂದೆ ಕೊಲೆಯತ್ನ ಸೇರಿದಂತೆ 12 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ನಿತಿನ್ ಮೇಲೆ ಈ ಹಿಂದೆ ಒಂದು ಪ್ರಕರಣ, ಅಣ್ಣಪ್ಪ ಮೇಲೆ ಎರಡು ಪ್ರಕರಣ, ಪ್ರೀತಮ್ ಶೆಟ್ಟಿ ಮೇಲೆ ಈ ಹಿಂದೆ ಎರಡು ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ ಒಂದು ಸ್ವಿಫ್ಟ್ ಕಾರು, 2 ಬೈಕು, ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಆರೋಪಿಗಳು ಜನತಾ ಕಾಲನಿ ಸ್ಮಶಾನದ ಕಡೆಯಿಂದ ಎರಡು ಬೈಕ್ ಗಳಲ್ಲಿ ಬಂದು, ಮಸೀದಿಯ ಹಿಂಭಾಗದ ಕಿಟಕಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಬಳಿಕ ಒಂದು ಬೈಕ್ ನಲ್ಲಿದ್ದ ಮೂವರು ಗಣೇಶ ಕಟ್ಟೆಯ ಕಡೆ ತೆರಳಿದ್ದರೆ, ಇನ್ನೊಂದು ಬೈಕ್ ನಲ್ಲಿದ್ದ ಇಬ್ಬರು ಬೈಕ್ ತಿರುಗಿಸಿಕೊಂಡು ವಾಪಾಸ್ ಸ್ಮಶಾನದ ಕಡೆಗೆ ಪರಾರಿಯಾಗಿದ್ದರು. ಕೂಡಲೇ ಮಸೀದಿ ಕಮಿಟಿಯವರು ಸುರತ್ಕಲ್ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಂದೋಬಸ್ತ್ ಮಾಡಿದ್ದರು.ಪೊಲೀಸರು ಸಿಸಿಟಿವಿಯಲ್ಲಿ ಗಮನಿಸಿದ್ದು, ಗಣೇಶ್ ಕಟ್ಟೆ ಮೂಲಕ ಪರಾರಿಯಾಗಿದ್ದರು ಎಂಬುದನ್ನು ಪತ್ತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿದ್ದರು. ಹೇಳಿಕೆಯಲ್ಲಿ ಕದ್ರಿ ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post