ಮಂಗಳೂರು, ಸೆ.16: ನಾಗಮಂಗಲ ಕೋಮು ಕಿಚ್ಚಿನ ಬೆನ್ನಲ್ಲೇ ಕರಾವಳಿಯಲ್ಲೂ ದ್ವೇಷದ ಕಾವು ತೀವ್ರತೆ ಪಡ್ಕೊಂಡಿದೆ. ಈದ್ ಮೆರವಣಿಗೆ ತಡೆಯಿರಿ, ಶರಣ್ ಪಂಪ್ವೆಲ್ ತಾಕತ್ತಿದ್ದರೆ ಬಿಸಿ ರೋಡಿಗೆ ಬಂದು ನೋಡಲಿ ಎಂದು ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಕಿದ ಸವಾಲಿಗೆ ಹಿಂದು ಸಂಘಟನೆ ಕಾರ್ಯಕರ್ತರು ಬಿಸಿ ರೋಡಿನಲ್ಲೇ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದು ಪಾಕಿಸ್ತಾನ ಅಲ್ಲ, ನಾವು ಭಾರತದಲ್ಲಿ ಎಲ್ಲಿ ಬೇಕಾದರೂ ಬರುತ್ತೇವೆ ತಡೆಯಿರಿ ನೋಡೋಣ ಎಂದು ಪ್ರತಿ ಸವಾಲು ಹಾಕಿದ್ದಾರೆ.
ನಾಗಮಂಗಲ ಗಲಭೆ ಘಟನೆ ಖಂಡಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮುಸ್ಲಿಮರ ಈದ್ ಮೆರವಣಿಗೆಯನ್ನು ಹಿಂದುಗಳು ವಿರೋಧಿಸಿದರೆ ಪರಿಸ್ಥಿತಿ ಏನಾಗಬಹುದು. ಇವರು ಗಲಭೆ ನಡೆಸುವುದಕ್ಕಾಗಿಯೇ ಈ ರೀತಿ ಮಾಡುತ್ತಿದ್ದಾರೆ. ಹಾಗಾಗಿ ಈ ಸಲ ಈದ್ ಮೆರವಣಿಗೆ ನಡೆಸುವುದಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಆಗ್ರಹ ಮಾಡಿದ್ದರು. ಇದೇ ನೆಪದಲ್ಲಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಮಹಮ್ಮದ್ ಶರೀಫ್, ತಾಕತ್ತಿದ್ದರೆ ಶರಣ್ ಪಂಪ್ವೆಲ್ ಬಿಸಿ ರೋಡಿಗೆ ಬಂದು ನೋಡಲಿ. ಈದ್ ಮೆರವಣಿಗೆ ತಡೆಯಲಿ ಎಂದು ವಾಯ್ಸ್ ಮೆಸೇಜ್ ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಬಜರಂಗದಳ ಮುಖಂಡರು, ನಾವು ಬಿಸಿ ರೋಡಿಗೆ ಬಂದೇ ಬರುತ್ತೇವೆ ಎಂದೂ ಫೇಸ್ಬುಕ್ ನಲ್ಲಿ ಪ್ರತಿ ಸವಾಲಿನ ಪೋಸ್ಟ್ ಹಾಕಿದ್ದರು.
ಇಂದು ಬೆಳಗ್ಗೆ ಎಂದಿನಂತೆ ಈದ್ ಮೆರವಣಿಗೆಯೂ ನಡೆದಿದೆ, ಪೊಲೀಸರು ಹೆಚ್ಚುವರಿ ಪಡೆಗಳನ್ನು ಕರೆಸಿ ಬಂದೋಬಸ್ತ್ ಮಾಡಿದ್ದಾರೆ, ಇದರ ಬೆನ್ನಲ್ಲೇ ಬಿಸಿ ರೋಡ್ ನಲ್ಲಿ ಸಾವಿರಾರು ಹಿಂದು ಸಂಘಟನೆ ಕಾರ್ಯಕರ್ತರು ಸೇರಿದ್ದಾರೆ. ಅಲ್ಲದೆ, ಶರಣ್ ಪಂಪ್ವೆಲ್ ಮತ್ತು ಇತರ ಹಿಂದು ಸಂಘಟನೆ ನಾಯಕರು ಆಗಮಿಸಿದ್ದು, ಪೊಲೀಸರು ಹಾಕಿದ್ದ ತಡೆಬೇಲಿಯನ್ನು ತಳ್ಳಿಕೊಂಡು ಬಂದು ಶಕ್ತಿಪ್ರದರ್ಶನ ಮಾಡಿದ್ದಾರೆ. ಶರಣ್ ಅವರನ್ನು ಮೇಲೆತ್ತಿ ಕೇಸರಿ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಆನಂತರ, ಎಸ್ಪಿ ಯತೀಶ್ ಕುಮಾರ್ ಹಿಂದು ಸಂಘಟನೆ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದು, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶರಣ್ ಪಂಪ್ವೆಲ್, ಇದು ಪಾಕಿಸ್ತಾನ ಅಲ್ಲ, ಭಾರತ ಎನ್ನುವುದು ನೆನಪಿಟ್ಟುಕೊಳ್ಳಲಿ. ಯಾರೋ ಜಿಹಾದಿ ನಾಯಿಗಳು ಸವಾಲು ಹಾಕುತ್ತಾರೆ. ಅವರ ಹೇಳಿದ ಜಾಗಕ್ಕೆ ನಾವು ಬಂದಿದ್ದೇವೆ, ತಾಕತ್ತಿದ್ದರೆ ತಡೆದು ನೋಡಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ. ಅಲ್ಲದೆ, ಯಾರೋ ಸವಾಲು ಹಾಕುತ್ತಾರೆಂದು ಹಿಂದು ಸಮಾಜ ಸುಮ್ಮನೆ ಕೂರೋದಿಲ್ಲ. ನಾವೇನು ಹೇಡಿಗಳಲ್ಲ, ನಮಗೂ ಶಕ್ತಿ ಪ್ರದರ್ಶನ ಮಾಡುವ ತಾಕತ್ತಿದೆ ಎಂದು ಹೇಳಿದ್ದಾರೆ.
ವಿಎಚ್‌ಪಿ, ಬಜರಂಗದಳ ಸಂಘಟನೆಗಳ ಪ್ರಮುಖರಾದ ಪುನೀತ್ ಅತ್ತಾವರ, ಪ್ರಸಾದ್ ಕುಮಾರ್ ರೈ ಬಂಟ್ವಾಳ, ಭಾಸ್ಕರ್ ಧರ್ಮಸ್ಥಳ, ನವೀನ್ ನೆರಿಯಾ, ಭುಜಂಗ ಕುಲಾಲ್, ಗುರುರಾಜ್ ಬಂಟ್ವಾಳ, ನರಸಿಂಹ ಮಹೇಶ್ ಬೈಲೂರು, ಕೃಷ್ಣಪ್ರಸಾದ್, ಮಿಥುನ್ ಕಲ್ಲಡ್ಕ, ನವೀನ್ ಮೂಡುಶೆಡ್ಡೆ, ಸಚಿನ್ ಮೆಲ್ಕಾರ್, ಆರ್.ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಮೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಎ.ಗೋವಿಂದ ಪ್ರಭು, ಪುರುಷೋತ್ತಮ ಸಾಲಿಯಾನ್, ರಾಮದಾಸ್ ಬಂಟ್ವಾಳ ಮತ್ತಿತರರು ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post