ಮಂಗಳೂರು, ನ.16: ಟೇಕಾಫ್ ಆಗುವ ಹಂತದಲ್ಲೇ ಬೆಂಗಳೂರು ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಭಾರೀ ಅನಾಹುತದಿಂದ ಸ್ವಲ್ಪದರಲ್ಲೇ ಪಾರಾದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೈಲೆಟ್ ಸಮಯ ಪ್ರಜ್ಞೆಯಿಂದಾಗಿ ವಿಮಾನದಲ್ಲಿದ್ದ 236 ಜನರ ಜೀವ ಬಚಾವಾಗಿದೆ.
ಸಂಜೆ ಆರು ಗಂಟೆ ವೇಳೆಗೆ ವಿಮಾನ ಇನ್ನೇನು ಟೇಕ್ ಆಫ್ ಆಗುತ್ತೆ ಎನ್ನುವಾಗಲೇ ಪೈಲಟ್ ಇಂಜಿನ್ ನಲ್ಲಿ ದೋಷ ಇರುವುದನ್ನು ಕಂಡಿದ್ದು ಕೂಡಲೇ ಬ್ರೇಕ್ ಎಳೆದು ವಿಮಾನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಟೇಬಲ್ ಟಾಪ್ ಏರ್ಪೋರ್ಟ್ ಆಗಿದ್ದರಿಂದ ಅದಾಗಲೇ ವಿಮಾನ ಮುಂದಕ್ಕೆ ಹೋಗಿದ್ದು ಬ್ರೇಕ್ ಅದುಮಿದ್ದರಿಂದ ನಿಧಾನಕ್ಕೆ ಮುಂದಕ್ಕೆ ಹೋಗುತ್ತಾ ರನ್ ವೇ ಕೊನೆಯಲ್ಲಿ ನಿಂತು ಬಿಟ್ಟಿದೆ. ಇದರಿಂದ ಕೂದಲೆಳೆಯ ಅಂತರದಲ್ಲಿ ಭಾರೀ ದುರಂತ ತಪ್ಪಿದಂತಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ 229 ಪ್ರಯಾಣಿಕರು ಹಾಗು ಪೈಲಟ್ ಸೇರಿ 7 ಮಂದಿ ಸಿಬ್ಬಂದಿ ವರ್ಗ ಇದ್ದರು. ಪ್ರಯಾಣಿಕರು, ಸಿಬಂದಿ ಕುಳಿತ ಬಳಿಕ ಗ್ರೀನ್ ಸಿಗ್ನಲ್ ಸಿಗುತ್ತಲೇ ವಿಮಾನ ಮುಂದಕ್ಕೆ ಚಲಿಸಿತ್ತು. ಇನ್ನೇನು ಮೇಲಕ್ಕೆ ಹೋಗುತ್ತೆ ಎನ್ನುವಾಗಲೇ ವಿಮಾನದ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಆದರೆ ಪೈಲೆಟ್ ಸಮಯ ಪ್ರಜ್ಞೆ ಮೆರೆದು ಕೂಡಲೇ ಬ್ರೇಕ್ ಹಾಕಿ ವಿಮಾನ ನಿಲ್ಲಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ರನ್ ವೇ ಬಿಟ್ಟು ಮುಂದಕ್ಕೆ ಚಲಿಸುತ್ತಿದ್ದರೆ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗುವ ಸಾಧ್ಯತೆ ಇತ್ತು. ತಿರುಗಿ ಬಂದು ವಿಮಾನವನ್ನು ಇಳಿಸುವುದಕ್ಕೂ ಸಮಯ ಸಿಗುತ್ತಿರಲಿಲ್ಲ.
ತಕ್ಷಣ ವಿಮಾನ ನಿಲ್ಲಿಸಿದ್ದಲ್ಲದೆ, ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಮತ್ತೆ ಹಿಂದಕ್ಕೆ ಕರೆತಂದು ಪೈಲಟ್ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ವ್ಯವಸ್ಥೆ ಮಾಡಿದ್ದಾರೆ. ಇಂಡಿಗೋ ಸಂಸ್ಥೆಯು ಬಳಿಕ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟಿದೆ.
Discover more from Coastal Times Kannada
Subscribe to get the latest posts sent to your email.





Discussion about this post