ಮಂಗಳೂರು: ದೇಶ-ವಿದೇಶದ ವಿಶ್ವವಿದ್ಯಾನಿಲಯ, ಪ್ರತಿಷ್ಠಿತ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗದ ನಿರೀಕ್ಷೆಯಲ್ಲಿರುವ ಮಂಗಳೂರು ವಿ.ವಿ. ವ್ಯಾಪ್ತಿಯ ವಿದ್ಯಾರ್ಥಿಗಳು ಅಂಕಪಟ್ಟಿ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ.
ವಿ.ವಿ. ವ್ಯಾಪ್ತಿಯ ಎಲ್ಲ ಫಲಿತಾಂಶಗಳನ್ನು ಪ್ರಕಟಿಸಿದ ಅನಂತರವೇ ಅಂಕಪಟ್ಟಿ ನೀಡಬೇಕು ಎಂಬ ನಿಯಮ ಇರುವುದರಿಂದ ಈ ಅಂಕಪಟ್ಟಿ ಸಮಸ್ಯೆ ಎದುರಾಗಿದೆ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ವಿಶೇಷ ಪರೀಕ್ಷೆಯ ಮರುಮೌಲ್ಯಮಾಪನ ಈಗಷ್ಟೇ ನಡೆಯುತ್ತಿರುವುದರಿಂದ ಅದರ ಫಲಿತಾಂಶ ಬಂದ ಬಳಿಕವಷ್ಟೇ ಅಂಕಪಟ್ಟಿ ನೀಡಬೇಕಾ ಗಿದೆ. ಮಾರ್ಚ್ ಒಳಗೆ ಅಂಕಪಟ್ಟಿ ಸಿಗದಿದ್ದರೆ ಬಹುತೇಕ ವಿದ್ಯಾರ್ಥಿಗಳ ವಿದೇಶಿ ವಿದ್ಯಾಭ್ಯಾಸದ ಕನಸು ಅಥವಾ ಉನ್ನತ ವ್ಯಾಸಂಗದ ಆಸೆ ಭಗ್ನವಾಗಲಿದೆ.
ಕೊರೊನಾ ಮುನ್ನ ಪರೀಕ್ಷೆ ನಡೆದ 15-20 ದಿನಗಳ ಒಳಗೆ ಅಂಕಪಟ್ಟಿ ಆಯಾ ಕಾಲೇಜಿಗೆ ಬರುತ್ತಿತ್ತು. ಆದರೆ ಕೊರೊನಾ ಬಳಿಕ ಬೇರೆ ಬೇರೆ ಸ್ತರದಲ್ಲಿ ಪರೀಕ್ಷೆ ನಡೆದ ಕಾರಣ ಅಂಕಪಟ್ಟಿ ಕೂಡ ವಿಳಂಬವಾಗುತ್ತಿದೆ. ಅಂಕಪಟ್ಟಿ ಮುದ್ರಣ ವಿಚಾರದಲ್ಲಿಯೂ ಸಮಸ್ಯೆಯಾಗಿದೆ.
ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂದು ವಿ.ವಿ.ಯು ಅಂಕಪಟ್ಟಿಯನ್ನು ವೆಬ್‌ಸೈಟ್‌ನಿಂದ ಪಡೆಯಲು ಅವಕಾಶ ನೀಡಿತ್ತು. ಅದಕ್ಕೆ ಆಯಾ ಕಾಲೇಜು ಪ್ರಾಂಶುಪಾಲರ ಸಹಿ ಪಡೆದು ಉನ್ನತ ವ್ಯಾಸಂಗ ಪ್ರವೇಶ ಸಂದರ್ಭ ಬಳಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ದೇಶ-ವಿದೇಶದ ಪ್ರತಿಷ್ಠಿತ ಕಾಲೇಜು, ವಿ.ವಿ.ಗಳಿಗೆ ಇದು ಮಾನ್ಯವಾಗುವುದಿಲ್ಲ. ಅಲ್ಲಿಗೆ ಗ್ರೇಡ್ ಆಧಾರಿತ ವಿ.ವಿ.ಯ ಅಧಿಕೃತ ಅಂಕಪಟ್ಟಿಯೇ ಬೇಕು. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳು ಅಧಿಕೃತ ಅಂಕಪಟ್ಟಿಗಾಗಿ ಕಾಯುತ್ತಿದ್ದಾರೆ. “ವಾರದೊಳಗೆ ಅಂಕಪಟ್ಟಿ ನೀಡಲಾಗುವುದು’ ಎಂದು ವಿ.ವಿ. ಹೇಳಿ 2 ವಾರಗಳು ಕಳೆದಿವೆ. ವಿದೇಶಿ ವಿ.ವಿ.ಗಳ ಸೀಟ್‌ಗಾಗಿ ಲಕ್ಷಾಂತರ ರೂ. ಪಾವತಿಸಿ ವಿದ್ಯಾರ್ಥಿಗಳು ಕಾಯುತ್ತಿ ದ್ದಾರೆ. ವಿಳಂಬವಾದರೆ ಹಣವನ್ನೂ ಕಳೆದುಕೊಳ್ಳುವಂತಾದೀತು ಎದು ಉಪನ್ಯಾಸಕರೊಬ್ಬರು ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post