ಉಳ್ಳಾಲ: ತೊಕ್ಕೊಟ್ಟಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಯುವಕನೊಬ್ಬ ಯುವತಿಯನ್ನು ಚುಡಾಯಿಸಿದ ಕಾರಣಕ್ಕೆ ಯುವಕರ ನಡುವೆ ಹೊಯ್–ಕೈ ನಡೆದಿದೆ. ಅದನ್ನು ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆದಿದ್ದು, ರೊಚ್ಚಿಗೆದ್ದ ಪೊಲೀಸರು ಹಲ್ಲೆ ಮಾಡಿದವರನ್ನು ಅಟ್ಟಾಡಿಸಿ ಹೊಡೆದ ಘಟನೆ ಗುರುವಾರ ನಡೆದಿದೆ.
ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಸಭಾಂಗಣದಲ್ಲಿ ಮದುವೆ ಸಮಾರಂಭ ನಡೆದಿತ್ತು. ಕೋಟೆಕಾರು ಮಾಡೂರಿನ ವಧು ಮತ್ತು ಕಾಸರಗೋಡಿನ ವರನಿಗೆ ಮದುವೆ ನಡೆದಿತ್ತು. ಸಮಾರಂಭದಲ್ಲಿ ವರನ ಕಡೆಯ ಯುವಕ, ವಧುವಿನ ಕಡೆಯ ಯುವತಿಯ ಹಿಂದೆ ಬಿದ್ದು ಚುಡಾಯಿಸಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಿತನಾದ ಯುವತಿಯ ಸಹೋದರ, ಚುಡಾಯಿಸಿದವನಿಗೆ ಹಲ್ಲೆ ನಡೆಸಿದ್ದಾನೆ.
ಅದರ ಪರಿಣಾಮ ಪರಸ್ಪರ ಯುವಕರ ಗುಂಪಿನ ನಡುವೆ ಬೀದಿ ಕಾಳಗವೇ ನಡೆದಿದೆ. ಈ ವೇಳೆ ಉಳ್ಳಾಲ ಉರೂಸ್ ಬಂದೋಬಸ್ತ್‌ನಲ್ಲಿದ್ದ ಪೊಲೀಸರೊಬ್ಬರ ಕುತ್ತಿಗೆ ಹಿಸುಕಿ ಉದ್ರಿಕ್ತರು ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡು ಇತರ ಪೊಲೀಸರು ಹಲ್ಲೆ ಮಾಡಿದವರನ್ನು ಅಟ್ಟಾಡಿಸಿ ಹೊಡೆದು, ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.