ಮಂಗಳೂರು: ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹಿಜಾಬ್ ಧರಿಸಿ ಬರುವುದರ ಕುರಿತು ದೇಶದಾದ್ಯಂತ ಪರ–ವಿರೋಧ ಚರ್ಚೆಗಳು ಮುಂದುವರಿದಿದ್ದು, ಈ ನಡುವೆ ದಕ್ಷಿಣ ಕನ್ನಡದ ಉಜಿರೆಯ ವೈದ್ಯರೊಬ್ಬರ ಟ್ವಿಟರ್ ಖಾತೆ ಹ್ಯಾಕ್ ಮಾಡಿ ಹಿಜಾಬ್ ವಿರೋಧಿಸುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಕ್ಕಳ ತಜ್ಞ ಡಾ.ಶಾಂತನು ಆರ್ ಪ್ರಭು ಅವರು ದೂರು ನೀಡಿದ್ದು, ಅವರ ಟ್ವಿಟರ್ ಖಾತೆಯಲ್ಲಿ ಹಿಜಾಬ್ ವಿರೋಧಿಸುವ ಟ್ವೀಟ್ ಕಾಣಸಿಕೊಂಡಿರುವುದಾಗಿ ತಿಳಿಸಿದ್ದಾರೆ. ತನ್ನ ಹೆಸರಿಗೆ ಕಳಂಕ ತರುವ ಪ್ರಯತ್ನ ಇದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಪೋಸ್ಟ್ ಮಾಡಲಾಗಿದ್ದ ಟ್ವೀಟ್‌ನಲ್ಲಿ ‘ಇದು ತಾಲೀಬಾನ್ ಆಡಳಿತದ ರಾಷ್ಟ್ರವಲ್ಲ, ಸೌದಿ ಅರೇಬಿಯಾ ಅಥವಾ ಮದರಸಾ ಸಹ ಅಲ್ಲ ಹಾಗೂ ಹಿಜಾಬ್ ಇಲ್ಲಿ ಅನಗತ್ಯವಾದುದು. ನಿಮಗೆ ಹಿಜಾಬ್ ಧರಿಸಲೇ ಬೇಕೆಂದಿದ್ದರೆ ಮದರಸಾಗೆ ಹೋಗಿ,’ ಎಂದು ಪ್ರಕಟಿಸಲಾಗಿತ್ತು.
ಟ್ವೀಟ್ ಜೊತೆಗೆ ಕೈಯಲ್ಲಿ ಮಗುವನ್ನು ಹಿಡಿದಿರುವ ಅವರ ಚಿತ್ರದ ಸ್ಕ್ರೀನ್‌ಶಾಟ್ ಸಹ ಅಪ್‌ಲೋಡ್ ಮಾಡಲಾಗಿತ್ತು ಎಂದು ಶಾಂತನು ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಆ ಪೋಸ್ಟ್ ಬಳಸಿ ಕೆಲವು ಮಂದಿ ನಾನು ಕರ್ತವ್ಯ ನಿರ್ವಹಿಸುವ ಆಸ್ಪತ್ರೆಯ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ. ಇದು ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ. ಅಲ್ಪಸಂಖ್ಯಾತ ಸಮುದಾಯವರು ನಡೆಸುವ ವೈದ್ಯಕೀಯ ಕಾಲೇಜಿನಲ್ಲಿ ಓದಿರುವ ನನಗೆ ಹಿಜಾಬ್ ಎಂದರೆ ಏನೆಂದು ತಿಳಿದಿದೆ..’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post