ಮಡಿಕೇರಿ : ಯಾವುದೇ ಅಧಿಕೃತ ದಾಖಲಾತಿಗಳನ್ನು ಹೊಂದದೆ ವಂಚಿಸುವ ಉದ್ದೇಶದಿಂದ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಎಸ್.ವಿ.ಸ್ಮಾರ್ಟ್ ವಿಷನ್ ಎಂಬ ಸ್ಕೀಂನ ಮಾಲಕ ಸೇರಿದಂತೆ ಐವರು ಆರೋಪಿಗಳನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಸ್ಕೀಂ ಮಾಲಕ ಮಂಗಳೂರು ಸುರತ್ಕಲ್ ಮೂಲದ ಮುಹಮ್ಮದ್ ಅಶ್ರಫ್(37), ಮಡಿಕೇರಿಯ ಮಲ್ಲಿಕಾರ್ಜುನ ನಗರದ ನಿವಾಸಿ ಎಂ.ವೈ.ಸುಲೈಮಾನ್(37), ತ್ಯಾಗರಾಜ ಕಾಲನಿಯ ಅಬ್ದುಲ್ ಗಫೂರ್(34), ಮುಹಮ್ಮದ್ ಅಕ್ರಮ್(34) ಹಾಗೂ ಕುಂಬಳಕೇರಿ ನಿವಾಸಿ ಎಚ್.ಎನ್.ಕಿಶೋರ್(41) ಬಂಧಿತ ಆರೋಪಿಗಳು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆಯಲ್ಲಿ ಜನವರಿ 30ರಿಂದ ಎಸ್.ವಿ. ಸ್ಮಾರ್ಟ್ ವಿಷನ್ ಸ್ಕೀಂ ನಡೆಸಲಾಗುತ್ತಿದ್ದು, ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿದ್ದರು. ಈ ಸ್ಕೀಂನಲ್ಲಿ ಈಗಾಗಲೇ 1,100ಕ್ಕೂ ಅಧಿಕ ಮಂದಿ ಸೇರಿಕೊಂಡಿದ್ದಾರೆ. ಸ್ಕೀಂಗೆ ಸೇರಲು ಪ್ರತಿ ತಿಂಗಳು 1 ಸಾವಿರ ರೂ.ನಂತೆ 24 ಕಂತುಗಳನ್ನು ಗ್ರಾಹಕರು ಕಟ್ಟಬೇಕಾಗಿರುತ್ತದೆ. ಪ್ರತಿ ತಿಂಗಳ 30ನೇ ತಾರೀಖಿನಂದು ಸಂಜೆ 5 ಗಂಟೆಗೆ ಲಕ್ಕಿ ಡ್ರಾ ಮಾಡಿ ಫಲಿತಾಂಶವನ್ನು ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ತಿಳಿಸಿ ಬಹುಮಾನವನ್ನು 50-60 ದಿನಗಳಲ್ಲಿ ಗ್ರಾಹಕರಿಗೆ ನೀಡಲಾಗುವುದು. 20 ತಿಂಗಳ ಲಕ್ಕಿ ಡ್ರಾನಲ್ಲಿ ಒಟ್ಟು 96 ಜನರಿಗೆ ವಿವಿಧ ರೀತಿಯ ಬಹುಮಾನವನ್ನು ನೀಡುವುದಾಗಿ ಘೋಷಿಸಿಕೊಂಡಿದ್ದರು ಎಂದರು.
ಇಂತಹ ಸ್ಕೀಂಗಳನ್ನು ನಡೆಸುವವರು ಬ್ಯಾಂಕಿಂಗ್ ಸಹಿತ ವಿವಿಧ ಇಲಾಖೆಗಳ ಅನುಮತಿ ಮತ್ತು ಪರವಾನಿಗೆ ಪಡೆದಿರಬೇಕು ಎಂಬ ನಿಯಮವಿದೆ. ಅಲ್ಲದೆ ಸಾರ್ವಜನಿಕರಿಂದ ಠೇವಣಿ ಮಾದರಿಯಲ್ಲಿ ಹಣ ಸಂಗ್ರಹಿಸುವ ಮುನ್ನ ಬ್ಯಾಂಕಿಂಗ್ ವಲಯದ ಅನುಮತಿ ಪಡೆದಿರಬೇಕು. ಆದಾಯ ತೆರಿಗೆ, ಜಿಎಸ್‌ಟಿ ಪಾವತಿಗೆ ಸಂಬಂಧಿಸಿದಂತೆ ದಾಖಲಾತಿ ಹೊಂದಿರಬೇಕು. ಆದರೆ, ಎಸ್.ವಿ ಸ್ಮಾರ್ಟ್ ಮಿಷನ್ ಎಂಬ ಸ್ಕೀಂ ನಡೆಸುತ್ತಿದ್ದವರು ಯಾವುದೇ ದಾಖಲೆ, ಪರವಾನಿಗೆ ಪಡೆಯದೆ ಸ್ಕೀಂ ನಡೆಸುತ್ತಿದ್ದರು ಎಂದು ವಿವರಿಸಿದರು.
ಮೊದಲನೇ ತಿಂಗಳ ಬಹುಮಾನವಾಗಿ ಒಬ್ಬರಿಗೆ ಥಾರ್ ಜೀಪ್ ಹಾಗೂ 8 ಜನರಿಗೆ ಬೈಕ್ ನೀಡಬೇಕಾಗಿದ್ದು, ಥಾರ್ ಜೀಪ್ ಬದಲಾಗಿ 7.60 ಲಕ್ಷ ರೂ. ಮತ್ತು 7 ಜನರಿಗೆ 43 ಸಾವಿರ ರೂ. ಚೆಕ್ ಅನ್ನು ನೀಡಿದ್ದಾರೆ. ಪೊಲೀಸ್ ಗುಪ್ತದಳದ ಸಿಬ್ಬಂದಿ ಮೂಲಕ ಪಡೆದ ಮಾಹಿತಿ ಆಧರಿಸಿ ಈ ಸ್ಕೀಂ ವಿರುದ್ಧ ನಗರ ಠಾಣೆಯಲ್ಲಿ ಸುಮೊಟೊ ಕೇಸ್ ದಾಖಲಿಸಲಾಗಿದೆ. ಸ್ಕೀಂ ನಡೆಸುತ್ತಿದ್ದ ಕಟ್ಟಡ ಕಚೇರಿಯಲ್ಲಿದ್ದ ವಿವಿಧ ಉಪಕರಣಗಳನ್ನು ಇದೀಗ ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಇವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಅಗತ್ಯವಿರುವ ಕಾರಣ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಎಸ್ಪಿ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post