ಮುಂಬೈ: ಪೊಲೀಸರು ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಬಂಧಿಸಿದ ಘಟನೆಯೊಂದು ನಡೆದಿದೆ. ಮದುವೆಯಲ್ಲಿ ಸಂಬಂಧಿಗಳಂತೆ ವೇಷ ಧರಿಸಿ ಬಂದಿದ್ದ ಪೊಲೀಸರು ಕಳ್ಳನನ್ನ ಬಲೆಗೆ ಬೀಳಿಸಿದ್ದಾರೆ. ಮುಂಬೈನ ಹಳ್ಳಿಯೊಂದರಲ್ಲಿ ನಡೆದ ಘಟನೆ ಇದಾಗಿದೆ. ಇದೊಂದು ಇಂಟರೆಸ್ಟಿಂಗ್ ಸ್ಟೋರಿ. 15 ತಿಂಗಳ ಹಿಂದೆ ಬರೋಬ್ಬರಿ 50 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದ ಕಳ್ಳನಿಗೆ ಪೊಲೀಸರು ಬಲೆ ಬೀಸಿದ್ದರು. ಹಳ್ಳಿಯೊಂದರಲ್ಲಿ ನಡೆದ ವಿವಾಹದಲ್ಲಿ ಪೊಲೀಸರು ಖದೀಮನಿಗೆ ಖೋಳ ತೊಡಿಸಿದ್ದಾರೆ. ಯವತ್ಮಾಲ್ ಜಿಲ್ಲೆಯ ದರ್ವಾ ತಾಲೂಕಿನ ಸೈಖೇಡಾ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಪೊಲೀಸರು ಸಂಬಂಧಿಗಳ ವೇಷದಲ್ಲಿ ಬಂದು ಕಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದಾದರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮದುವೆಯಲ್ಲಿ ಬರಾತಿಸ್ ವೇಷ ಧರಿಸಿ ಬಂದು, ವರ್ಲಿಯಲ್ಲಿನ ಮನೆಯೊಂದರಲ್ಲಿ 50 ಲಕ್ಷ ನಗದು ಕಳವು ಮಾಡಿ, 15 ತಿಂಗಳಿಂದ ತಲೆಮರೆಸಿಕೊಂಡಿದ್ದ ದೇವ್ಕರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇದಕ್ಕಾಗಿ ಪೊಲೀಸರು ಮೊದಲೇ ತಯಾರಿ ಮಾಡಿಕೊಂಡಿದ್ದರು. ಆರೋಪಿ ದೇವ್ಕರ್ ಸಂಬಂಧಿಯಾದ ಖಾರ್ ನಿವಾಸಿ ವಿನೋದ್ ದೇವ್ಕರ್, ಚಲನವಲನಗಳನ್ನು ಪತ್ತೆ ಹಚ್ಚಿ, ಮದುವೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇದು ಆರೋಪಿ ದೇವ್ಕರ್ ಸೋದರ ಸೊಸೆಯ ಮದುವೆ ಎಂದು ಗೊತ್ತಾದ ಕೂಡಲೇ ಪೊಲೀಸರು, ಕಳ್ಳನಿಗಾಗಿ ಪ್ಲಾನ್ ಮಾಡಿದ್ರು. ಅದರಂತೆ ಮದುವೆಯಲ್ಲಿ ವೇಷ ಧರಿಸಿ ಬಂದು ಖದೀಮನನ್ನು ಬಂಧಿಸಿದ್ದಾರೆ.

ಮೇ 15 ರಂದು ಸೈಖೇಡಾ ಗ್ರಾಮದಲ್ಲಿ ಮದುವೆ ಇರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಂಡಿದ್ದರು. ನಂತರ ಪೊಲೀಸ್ ತಂಡ, ಗ್ರಾಮಕ್ಕೆ ಬಂದು, ಖದೀಮನನ್ನ ಗುರುತಿಸಿ, ಬಂಧಿಸಲಾಗಿದೆ ಎಂದು ದಾದರ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ರಾಮಕೃಷ್ಣ ಸಾಗಡೆ ಹೇಳಿದ್ದಾರೆ. ಸದ್ಯ ಆರೋಪಿ ದೇವ್ಕರ್ ನನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೇ 22 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇನ್ನು ಆರೋಪಿ ದೇವ್ಕರ್, ಮಾರ್ಚ್ 17, 2022 ರಂದು ವರ್ಲಿಯ ವೀರ್ ನಾರಿಮನ್ ರಸ್ತೆಯಲ್ಲಿರುವ ಸಂದೀಪ್ ಜಗನ್ನಾಥ್ ದೇಸಾಯಿ ಅವರ ನಿವಾಸದಲ್ಲಿ ಕಳ್ಳತನ ಮಾಡಿದ್ದ.
ಸಂದೀಪ್ ಜಗನ್ನಾಥ್ ದೇಸಾಯಿ ಕುಟುಂಬವು ಪನ್ವೆಲ್ ನಲ್ಲಿರುವ ಫಾರ್ಮ್ಹೌಸ್ಗೆ ಪೂಜೆಗೆ ಹೋಗಿದ್ದ ಸಮಯದಲ್ಲಿ ಕಳ್ಳ ದೇವ್ಕರ್ 50 ಲಕ್ಷ ನಗದು ದೋಚಿ ಪರಾರಿಯಾಗಿದ್ದ. ಆರೋಪಿ ನಕಲಿ ಕೀ ಬಳಸಿ ಮನೆ ದೋಚಿರುವುದು ಗೊತ್ತಾಗಿದೆ. ಈ ಸಂಬಂಧ ಪೊಲೀಸರು ಮನೆಯೊಳಗಿರುವ ಜನರದ್ದೇ ಪಾತ್ರವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಘಟನೆ ಸಂಬಂಧ ಸಂದೀಪ್ ಜಗನ್ನಾಥ್ ದೇಸಾಯಿ ಕುಟುಂಬದ ಕಾರು ಚಾಲಕ ಪ್ರದೀಪ್ ಕಾನಡೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ದೇವ್ಕರ್ಗೆ ನಕಲಿ ಕೀಲಿ ಒದಗಿಸಲು ಕಾರು ಚಾಲಕ ಪ್ರದೀಪ್ ಕಾನಡೆ ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದಾದರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಮುಗುತ್ರಾವ್ ಹೇಳಿದ್ದಾರೆ.
ಇನ್ನು ಪೊಲೀಸರು, ಬಹಳ ದಿನಗಳಿಂದ ಆರೋಪಿ ದೇವ್ಕರ್ ಮತ್ತು ತಂಡವನ್ನು ಹಿಡಿಯಲು ಪ್ಲಾನ್ ರೂಪಿಸಿತ್ತು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿ ದೇವ್ಕರ್ ಗಾಗಿ ಹುಡುಕಾಟ ನಡೆಸಿದ್ದರು. ಸದ್ಯ ದೇವ್ಕರ್ ಸಂಬಂಧಿಕರಾದ ರಾಹುಲ್ ಕುರಾದ್ಕರ್, ಮನೀಶ್ ಪರಬ್, ಭೂಷಣ್ ಪವಾರ್ ಮತ್ತು ಮಂಗಳಾ ಕುರಾಡ್ಕರ್ ರನ್ನು ಬಂಧಿಸಿದ್ದಾರೆ. ಅವರ ಬಳಿ ಕದ್ದ ಹಣದ ದೊಡ್ಡ ಮೊತ್ತವಿತ್ತು. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ರು. ಆರೋಪಿ ದೇವ್ಕರ್, ರಾಜಸ್ಥಾನದಲ್ಲಿ ಕಾರ್ ಶೋರೂಮ್ ಅನ್ನು ಪ್ರಾರಂಭಿಸಿ, ಹಣವನ್ನು ಸ್ವೀಕರಿಸುವ ಮೂಲಕ ಮತ್ತು ಕಾರುಗಳನ್ನು ವಿತರಿಸದೆ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post