ನವದೆಹಲಿ: 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸಿರ್ ಮದನಿ ಅವರು ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಿ, ಅಲ್ಲಿಯೇ ಉಳಿಯಲು ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಪೊಲೀಸರ ಬೆಂಗಾವಲು ಇಲ್ಲದೆ ಕೇರಳಕ್ಕೆ ತೆರಳಲು ಮಅದನಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ವಿಚಾರಣೆ ಮುಗಿಯುವವರೆಗೆ ಬೆಂಗಳೂರಿನಲ್ಲಿಯೇ ಇರಬೇಕೆಂಬ ಷರತ್ತು ಕೂಡ ರದ್ದಾಗಿದೆ.
ನಾಸಿರ್ ಮಅದನಿ ಅವರು ಕೊಲ್ಲಂ ಜಿಲ್ಲೆಯಲ್ಲಿಯೇ ಇರುವಂತೆ ಕೋರ್ಟ್ ಆರಂಭದಲ್ಲಿ ಸೂಚಿಸಿದ್ದರೂ ವಕೀಲರ ಮನವಿ ಮೇರೆಗೆ ಚಿಕಿತ್ಸೆಗಾಗಿ ಜಿಲ್ಲೆ ತೊರೆಯಲು ಅವಕಾಶ ನೀಡಲಾಗಿದೆ. ಪ್ರಯಾಣಕ್ಕೆ ಕೊಲ್ಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆಯಬೇಕು ಎಂದು ನ್ಯಾಯಾಲಯ ಸೂಚಿಸಿದೆ.
‘ಅರ್ಜಿದಾರರಿಗೆ ಕೇರಳಕ್ಕೆ ತೆರಳಲು ಹಾಗೂ ಅಲ್ಲಿಯೇ ಉಳಿಯಲು ಅನುಮತಿ ನೀಡಲಾಗಿದೆ’ ಎಂದು ನ್ಯಾಯಪೀಠವು ತಿಳಿಸಿದೆ. ಆದಾಗ್ಯೂ, ಅರ್ಜಿದಾರರ ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ 15 ದಿನಗಳಿಗೊಮ್ಮೆ ಅರ್ಜಿದಾರರು ಕೊಲ್ಲಂ ಜಿಲ್ಲೆಯ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಲು ನ್ಯಾಯಪೀಠವು ಸೂಚಿಸಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮದನಿ ಅವರಿಗೆ ಸುಪ್ರೀಂ ಕೋರ್ಟ್ 2014ರಲ್ಲಿ ಜಾಮೀನು ನೀಡಿತ್ತು. ಆದರೆ, ಬೆಂಗಳೂರನ್ನು ಬಿಟ್ಟು ತೆರಳದಂತೆ ಸೂಚಿಸಿತ್ತು.
ಬೆಂಗಳೂರು ಸ್ಫೋಟ ಪ್ರಕರಣದ ನ್ಯಾಯಾಲಯದ ವಿಚಾರಣೆಯಲ್ಲಿ ಇನ್ನು ಮುಂದೆ ಮದನಿ ಹಾಜರಿ ಅಗತ್ಯವಿಲ್ಲ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್ ಮಅದನಿಗೆ ಕೇರಳದಲ್ಲಿಯೇ ಇರುವಂತೆ ಸೂಚಿಸಿದೆ. ಆದರೆ ಅಗತ್ಯವಿದ್ದರೆ ಬೆಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೇಳಿದೆ.
2008ರ ಜುಲೈ 25ರಂದು ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಇಬ್ಬರು ಸಾವಿಗೀಡಾಗಿ, 20 ಮಂದಿ ಗಾಯಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post