ಮಂಗಳೂರು: ನಮೀಬಿಯಾದಿಂದ ಚೀತಾಗಳನ್ನು ಭಾರತಕ್ಕೆ ತಂದ ನಿಯೋಗದಲ್ಲಿದ್ದ ಪಶುವೈದ್ಯ ಡಾ.ಸನತ್ ಕೃಷ್ಣ ಮುಳಿಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದವರು. ಅವರು ನವದೆಹಲಿಯ ನ್ಯಾಷನಲ್ ಝೂವಾಲಾಜಿಕಲ್ ಪಾರ್ಕ್‌ನಲ್ಲಿ ಸಹಾಯಕ ಪಶುವೈದ್ಯಕೀಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಭಾರತಕ್ಕೆ ಚೀತಾಗಳನ್ನು ತಂದ ಬಗ್ಗೆ ಖುಷಿ ಹಂಚಿಕೊಂಡ ಡಾ.ಸನತ್‌ಕೃಷ್ಣ ಮುಳಿಯ ಅವರ ಸಂಬಂಧಿ, ಗುತ್ತಿಗಾರು ಗ್ರಾಮದ ಕೇಶವ ಭಟ್ ಮುಳಿಯ, ‘ಇದು ದೇಶಕ್ಕೆ ಹೆಮ್ಮಯ ಕ್ಷಣ. ಅಂತೆಯೇ ಈ ಚೀತಾಗಳನ್ನು ಕರೆತಂದ ತಂಡದಲ್ಲಿದ್ದ ಪಶುವೈದ್ಯರು ನಮ್ಮ ರಾಜ್ಯದವರು ಎಂಬುದು ಕೂಡಾ ಹೆಮ್ಮೆ ಪಡುವ ವಿಷಯ. ಬಾಲ್ಯದಿಂದಲೂ ಸನತ್‌ಕೃಷ್ಣಗೆ ವನ್ಯಜೀವಿಗಳು ಹಾಗೂ ಪ್ರಾಣಿಗಳು ಎಂದರೆ ಪಂಚಪ್ರಾಣ. ಹಾಗಾಗಿಯೇ, ತಂದೆಯವರು ಚಿನ್ನಾಭರಣಗಳ ವ್ಯಾಪಾರಿಯಾದರೂ ಸನತ್‌ಕೃಷ್ಣ ವಿಭಿನ್ನ ವೃತ್ತಿಯನ್ನು ಆರಿಸಿಕೊಂಡಿದ್ದರು’ ಎಂದರು. ಡಾ.ಸನತ್‌ಕೃಷ್ಣ ಮುಳಿಯ ಅವರು ದಿ.ಕೇಶವ ಭಟ್ ಮುಳಿಯ– ಉಷಾ ದಂಪತಿಯ ಪುತ್ರ. ಅವರ ಪತ್ನಿ ಡಾ.ಪ್ರಿಯಾಂಕಾ ಜಾಸ್ತಾ ಅವರೂ ಪಶುವೈದ್ಯೆ.
‘ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿ.ಯು ಹಾಗೂ ಪದವಿ ಶಿಕ್ಷಣ ಪಡೆದ ಬಳಿಕ ಸನತ್ ಕೃಷ್ಣ ಅವರು ಬೆಂಗಳೂರಿನಲ್ಲಿ ಪಶುವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಈ ಹಿಂದೆ ಅವರು ಬನ್ನೇರುಘಟ್ಟ ಉದ್ಯಾನದಲ್ಲಿ ಕಾರ್ಯನಿರ್ವಹಿಸಿದ್ದರು. ಬಳಿಕ ಆಫ್ರಿಕಾದಲ್ಲಿ ಅಧ್ಯಯನ ನಡೆಸಿ, ಅಲ್ಲಿ ಕೆಲಕಾಲ ಪಶುವೈದ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು. ಹುಲಿಗಳಿಗೆ ಹಾಗೂ ಇತರ ವನ್ಯಜೀವಿಗಳಿಗೆ ರೇಡಿಯೊ ಕಾಲರ್ ಅಳವಡಿಕೆ, ಸ್ಮೃತಿ ತಪ್ಪಿಸುವ ಚುಚ್ಚುಮದ್ದು ನೀಡುವಿಕೆಯೂ ಸೇರಿದಂತೆ ಅನೇಕ ಪ್ರಮುಖ ಕಾರ್ಯಯೋಜನೆಗಳಲ್ಲಿ ಹಿಂದೆಯೂ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post