ಮಂಗಳೂರು, ಜ.17: ಈಜು ಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಸೋಮೇಶ್ವರದ ವಾಜ್ಕೋಸ್ ಬೀಚ್ ರೆಸಾರ್ಟ್ ಲೈಸನ್ಸ್ ಅನ್ನು ಪ್ರವಾಸೋದ್ಯಮ ಇಲಾಖೆ ತಾತ್ಕಾಲಿಕವಾಗಿ ರದ್ದು ಪಡಿಸಿದೆ. ಇದಕ್ಕೂ ಮೊದಲೇ ರೆಸಾರ್ಟ್ ಗೆ ನೀಡಲಾಗಿದ್ದ ಟ್ರೇಡ್ ಲೈಸನ್ಸ್ ಅನ್ನು ಅಮಾನತು ಪಡಿಸಿದ್ದಾಗಿ ಮಂಗಳೂರು ವಿಭಾಗಾಧಿಕಾರಿ ಹರ್ಷವರ್ಧನ್ ಮಾಹಿತಿ ನೀಡಿದ್ದರು. ಮೇಲ್ನೋಟಕ್ಕೆ ಈಜು ಕೊಳದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಯುವತಿಯರು ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಮೈಸೂರು ಮೂಲದ ಮೂವರು ಯುವತಿಯರಾದ ಕೀರ್ತನಾ ಎನ್ (21), ನಿಶಿತಾ ಎಂ ಡಿ (21) ಮತ್ತು ಪಾರ್ವತಿ ಎಸ್ (20) ಮೃತಪಟ್ಟ ವಿದ್ಯಾರ್ಥಿನಿಯರು. ಮೂವರು ಯುವತಿಯರು ಶನಿವಾರ ಮುಂಜಾನೆ ರೆಸಾರ್ಟ್ ಗೆ ಬಂದಿದ್ದರು. ಯುವತಿಯರು ಈಜುಕೊಳದ ದಂಡೆಯಲ್ಲಿ ಹೊರ ಉಡುಪುಗಳನ್ನ ಕಳಚಿಟ್ಟಿದ್ದು ಐಪೋನ್ ಒಂದನ್ನ ಈಜು ಕೊಳದ ನೀರಿಗೆ ಗುರಿಯಾಗಿ ರೆಕಾರ್ಡ್ ಇಟ್ಟು ನೀರಿಗೆ ಆಟಕ್ಕಿಳಿದಿದ್ದಾರೆ.
ಮೂವರೂ ಈಜುಕೊಳದಲ್ಲಿ ಆಟವಾಡುತ್ತಿದ್ದ ವೇಳೆ ಆರಂಭದಲ್ಲಿ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗೆ ಮುಂದಾದ ಮತ್ತೊಬ್ಬಾಕೆಯೂ ಮುಳುಗಿದ್ದ ಕಾರಣ ಮೂರನೇ ಯುವತಿಯೂ ರಕ್ಷಣೆಗೆಂದು ಅವರ ಬಳಿ ಬಂದ ಸಮಯದಲ್ಲಿ ಮೂವರೂ ಸಾವೀಗೀಡಾಗಿದ್ದಾರೆ. ಕೆಲವೇ ನಿಮಿಷದ ಅಂತರದಲ್ಲಿ ಈ ಘಟನೆ ನಡೆದಿದೆ. ಯುವತಿಯರಿಗೆ ಈಜು ತಿಳಿಯದೆ ಇರುವುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರೆಸಾರ್ಟ್ ಗೆ ಬೀಗ ಜಡಿಯಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಒಟ್ಟು ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದಾರೆ. ರೆಸಾರ್ಟ್ ಮಾಲೀಕ ಮನೋಹರ ಪುತ್ರನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೆಸಾರ್ಟ್ ನಲ್ಲಿ ಕೇವಲ ಎಂಟು ಮಂದಿ ಕೆಲಸಕ್ಕಿದ್ದರು ಎನ್ನಲಾಗುತ್ತಿದೆ. ಹೀಗಾಗಿ ಯುವತಿಯರು ಈಜು ಕೊಳ ಹೋಗಿದ್ದರೂ ಗಮನಿಸಿರಲಿಲ್ಲ. ಬೆಳಗ್ಗೆ 10.30ಕ್ಕೆ ನೋಡಿದಾಗ ಈಜು ಕೊಳದಲ್ಲಿ ಮುಳುಗಿರುವುದು ಪತ್ತೆಯಾಗಿತ್ತು. ಯುವತಿಯರು ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ರೆಸಾರ್ಟ್ ಸಿಸಿಟಿವಿಯಲ್ಲಿ ದಾಖಲಾಗಿದೆ. ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post