ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಯ ವೇಳೆ ಭಾರಿ ಕ್ರೇನ್ವೊಂದು ರೈಲ್ವೆ ಹಳಿಯ ಮೇಲೆ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ. ಘಟನೆಯಿಂದ ಕೆಲಕಾಲ ರೈಲು ಸಂಚಾರಕ್ಕೂ ಅಡಚಣೆ ಉಂಟಾಯಿತು.
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಸಮೀಪ ಬುಧವಾರ ಕಾಮಗಾರಿ ನಡೆಸಲು ಹಳಿಯ ಪಕ್ಕದಲ್ಲಿ ಕ್ರೇನ್ ಬಳಸಲಾಗುತ್ತಿತ್ತು. ಈ ವೇಳೆ ತಾಂತ್ರಿಕ ದೋಷ ಅಥವಾ ನೆಲದ ಕುಸಿತದಿಂದ ಸಮತೋಲನ ಕಳೆದುಕೊಂಡ ಪರಿಣಾಮ ಕ್ರೇನ್ ಏಕಾಏಕಿ ಪಲ್ಟಿಯಾಗಿ ರೈಲ್ವೆ ಹಳಿಯ ಮೇಲೆ ಉರುಳಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾತ್ರವಲ್ಲದೇ ಈ ವೇಳೆ, ಯಾವುದೇ ರೈಲುಗಳು ಆಗಮಿಸದ ಹಿನ್ನೆಲೆಯಲ್ಲಿ ಭಾರಿ ದುರಂತವೊಂದು ತಪ್ಪಿದೆ. ಕ್ರೇನ್ ಚಾಲಕ ಹಾಗೂ ಕಾರ್ಮಿಕರು ಕ್ಷಣಕಾಲದ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಭವಿಸಿದ ತಕ್ಷಣ ರೈಲ್ವೆ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಹಳಿಯ ಮೇಲೆ ಮಗುಚಿ ಬಿದ್ದ ಕ್ರೇನ್‌ನ್ನು ತೆರವುಗೊಳಿಸಲು ಮತ್ತೊಂದು ಯಂತ್ರದ ಸಹಾಯದಿಂದ ಕಾರ್ಯಾಚರಣೆ ನಡೆಸಲಾಯಿತು. ಸುರಕ್ಷತಾ ಕ್ರಮವಾಗಿ ಈ ಮಾರ್ಗದಲ್ಲಿ ಕೆಲಕಾಲ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ರೈಲು, ಗೂಡ್ಸ್‌ಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಯಿತು.

ಈ ಬಗ್ಗೆ ಮೈಸೂರು ವಿಭಾಗದ ಡಿಸಿಎಂ ಹಾಗೂ ಪಿಆರ್‌ಒ ಗಿರೀಶ್ ಧರ್ಮರಾಜ್ ಅವರು ಮಾತನಾಡಿ, ಮುಂಜಾನೆ 9:30ರಿಂದ 10:30 ಗಂಟೆಯವರೆಗೆ ಕುಕ್ಕೆ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ಗತಿಶಕ್ತಿ ಯೂನಿಟ್ ವತಿಯಿಂದ ಟ್ರ್ಯಾಕ್ ಮೂರರ ಕ್ಲಿಯರೆನ್ಸ್ ಪಡೆದು ಫೂಟ್ ಓವರ್ ಬ್ರಿಡ್ಜ್ (FOB) ಕಾಮಗಾರಿ ನಡೆಸಲಾಗುತ್ತಿತ್ತು. ಈ ಸಮಯದಲ್ಲಿ, ಸುಮಾರು 10:15ರ ವೇಳೆಗೆ ಕಾಮಗಾರಿ ನಡೆಸುತ್ತಿದ್ದ ಕ್ರೇನ್ವೊಂದು ಯಾವುದೋ ಕಾರಣದಿಂದಾಗಿ ನಿಯಂತ್ರಣ ತಪ್ಪಿ ಕೆಳಗಡೆ ಬಿದ್ದಿದೆ” ಎಂದರು.
ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣವೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಾರ್ಯಾಚರಣೆ ನಡೆಸಿ ಸಂಜೆ ಸುಮಾರು 3:15 ಗಂಟೆಗೆ ರೈಲ್ವೆ ಹಳಿಯನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಈಗಾಗಲೇ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಕಾಮಗಾರಿಯಲ್ಲಿ ಅಸಡ್ಡೆ ತೋರಿದ ಗುತ್ತಿಗೆದಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ. ತನಿಖಾ ವರದಿ ಬಂದ ನಂತರ ಕಳಪೆ ಕಾಮಗಾರಿ ಅಥವಾ ನಿರ್ಲಕ್ಷ್ಯ ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಗಿರೀಶ್ ಧರ್ಮರಾಜ್ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post