ಮಂಗಳೂರು, ಫೆ.18: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸತಾಗಿ ತೆರೆಯಲಾದ ಪೊಲೀಸ್ ಹೊರ ಠಾಣೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು. ವಿಮಾನ ನಿಲ್ದಾಣದ ನಿರ್ಗಮನ ಟೋಲ್ ಗೇಟ್ ಪಕ್ಕದಲ್ಲೇ ಔಟ್ ಪೋಸ್ಟ್ ಸ್ಥಾಪಿಸಲಾಗಿದ್ದು 24 ಗಂಟೆಯೂ ಪೊಲೀಸರು ಭದ್ರತೆ, ಇನ್ನಿತರ ಕೆಲಸಗಳಿಗೆ ಲಭ್ಯ ಇರಲಿದ್ದಾರೆ. ಭದ್ರತೆ ಅಥವಾ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸಂದರ್ಭದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗಲಿದೆ.
1,650 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಎರಡು ಅಂತಸ್ತಿನ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ. ನೆಲ ಮಹಡಿಯಲ್ಲಿ ಹೋಲ್ಡಿಂಗ್ ಸೆಲ್, ಎರಡು ಕಚೇರಿ ಕೊಠಡಿಗಳು ಇರಲಿದ್ದು ತಕ್ಷಣದ ಕಾರ್ಯ ನಿರ್ವಹಣೆಗಾಗಿ ಕೆಲಸ ಮಾಡಲಿದೆ. ಮೊದಲ ಮಹಡಿಯಲ್ಲಿ ಟರ್ಮಿನಲ್ ಕಟ್ಟಡದ ಹೊರಗೆ ವಾಹನ ಸಂಚಾರ ಮತ್ತು ಸಾರ್ವಜನಿಕ ಪ್ರದೇಶಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ವ್ಯವಸ್ಥೆ ಇರುತ್ತದೆ.

ಪ್ರಯಾಣಿಕರ ದಟ್ಟಣೆ ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆ ಹೆಚ್ಚುತ್ತಿರುವುದರಿಂದ ಭದ್ರತೆ ಬಲಪಡಿಸುವುದು ಅಗತ್ಯವಾಗಿರುತ್ತದೆ. ಇದಲ್ಲದೆ, ಯಾವುದೇ ಅಪರಾಧ ಚಟುವಟಿಕೆ ನಡೆದಲ್ಲಿ ಪೊಲೀಸರು ತುರ್ತು ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಹಿಂದೆ ಸ್ಥಳೀಯ ಬಜ್ಪೆ ಠಾಣೆಗೆ ದೂರು ಹೋದ ಬಳಿಕ ಪೊಲೀಸರು ಕ್ರಮ ಕೈಗೊಳ್ಳಬೇಕಿತ್ತು.
ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ , ಡಿಸಿಪಿ ರವಿಶಂಕರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಪೂರ್, ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post