ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಗ್ರಾಮದ ಅಡ್ಡಹೊಳೆ ಪುಲ್ಲೋಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಾ.20 ರಂದು ಸ್ಥಳೀಯರು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಶಿರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸಾಮಾಜಿಕ ಮುಖಂಡ ಎಂ.ಕೆ. ಪೌಲೋಸ್ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಹೆದ್ದಾರಿ ಕಾಮಗಾರಿ ಪ್ರಾರಂಭವಾದಾಗಿನಿಂದ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯ ತೊಂದರೆಯಾಗುತ್ತಲೇ ಬಂದಿದೆ. ಶಿರಾಡಿ ಗ್ರಾಮದ ವಾರ್ಡ್ ಸಂಖ್ಯೆ 2 ಮತ್ತು 3 ರಲ್ಲಿ ವಾಸಿಸುವ 500 ಕ್ಕೂ ಹೆಚ್ಚು ಜನರಿಗೆ ತಾವು ವಾಸಿಸುವ ಜಾಗಕ್ಕೆ ಹೋಗಲು ಇರುವ ಯು-ಟರ್ನ್ ಅನ್ನು ನೇರಗೊಳಿಸಲು ಮನವಿ ಮಾಡಿದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ ಮೇಲೆ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈಗ ತುರ್ತಾಗಿ ಬಂದು ಯು-ಟರ್ನ್ ಬಂದ್ ಮಾಡಲು ಹೊರಟಿದ್ದಾರೆ.
ಸಂತ ಜೋಸೆಫ್ ಚರ್ಚ್ ಬಳಿಯ ಪಂಚಾಯಿತಿ ರಸ್ತೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ರಸ್ತೆ ಅಗಲಿಸಿ ಕಾಂಕ್ರೀಟ್ ಮಾಡುವುದಾಗಿ ಹೇಳಿ ವಂಚಿಸಲಾಗಿದೆ. ಅಲ್ಲದೆ, ಚರಂಡಿಗೆ ಸ್ಲ್ಯಾಬ್ ಹಾಕದೆ ಬಿಟ್ಟಿರುವುದರಿಂದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಹೈಸ್ಕೂಲ್ ಬಳಿ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅಲ್ಲದೆ, ಫ್ಲೈಓವರ್ ಮಾಡಬೇಕೆಂಬ ಮನವಿಯನ್ನೂ ನಿರಾಕರಿಸಲಾಗಿದೆ. ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ರಸ್ತೆ ಕಾಂಕ್ರೀಟಿಕರಣದ ಕೆಲಸವನ್ನು ಕೈಗೊಂಡಿಲ್ಲ. ಶಿರಾಡಿ ಆಸ್ಪತ್ರೆಗೆ ಹೋಗುವ ರಸ್ತೆಯ ದುರಸ್ತಿ ಕಾರ್ಯವೂ ಅಸಮರ್ಪಕವಾಗಿದೆ. ಪೇರಿಯಶಾಂತಿಯಿಂದ ಅಡ್ಡಹೊಳೆವರೆಗೆ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಇದನ್ನು ಪುನರ್-ನಿರ್ಮಿಸಬೇಕು.
ಈ ಎಲ್ಲಾ ಸಮಸ್ಯೆಗಳನ್ನು ನಿರ್ಲಕ್ಷಿಸಿರುವ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಶಿರಾಡಿ ಮತ್ತು ಶಿರಿಬಾಗಿಲು ಗ್ರಾಮದ ಜನರು ಮಾರ್ಚ್ 20 ರಂದು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಹೋರಾಟ ಸಮಿತಿಯ ಅಧ್ಯಕ್ಷ ಜೋಸೆಫ್ ವಿ.ಎ., ಕಡಬ ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಸಂತೋಷ್ ಅಡ್ಡಹೊಳೆ, ಹೋರಾಟ ಸಮಿತಿಯ ಕಾರ್ಯದರ್ಶಿ ತೋಮಸ್ ವಿ.ಜೆ., ಉಪಾಧ್ಯಕ್ಷ ಪ್ರಕಾಶ್ ಅಡ್ಡಹೊಳೆ ಹಾಗೂ ಹಲವಾರು ಜನಪ್ರತಿನಿಧಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪೌಲೋಸ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post