ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಒಂಬತ್ತು ತಿಂಗಳ ನಂತರ ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ 3:27ಕ್ಕೆ ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗಿಳಿದರು. ಇಬ್ಬರೂ ಕಳೆದ ವರ್ಷ ಜೂನ್‌ನಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ತಾಂತ್ರಿಕ ತೊಂದರೆಗಳು ಮತ್ತು ವೇಳಾಪಟ್ಟಿಯಲ್ಲಿನ ಬದಲಾವಣೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಕೆಲವೇ ದಿನಗಳ ಈ ಕಾರ್ಯಾಚರಣೆ ಒಂಬತ್ತು ತಿಂಗಳಿಗೆ ವಿಸ್ತರಣೆಗೊಂಡಿತ್ತು.
ಹಾಗಾಗಿ, 59 ವರ್ಷದ ಸುನೀತಾ ವಿಲಿಯಮ್ಸ್ ಮತ್ತು 62 ವರ್ಷದ ಬುಚ್ ವಿಲ್ಮೋರ್ ಭೂಮಿಗೆ ಮರಳುವುದನ್ನು ಕಾಯಲಾಗುತ್ತಿತ್ತು. ಈ ಕಾಯುವಿಕೆ ಇದೀಗ ಇಬ್ಬರೂ ಸುರಕ್ಷಿತವಾಗಿ ಮರಳುವುದರೊಂದಿಗೆ ಕೊನೆಗೊಂಡಿದೆ.
ಜೂನ್ 2024ರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರೊಂದಿಗೆ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಕೂಡಾ ಮರಳಿದ್ದಾರೆ. ಐಎಸ್‌ಎಸ್ ಕ್ರೂ-9 ಸದಸ್ಯರನ್ನು ಹೊತ್ತ ಸ್ಪೇಸ್‌ಎಕ್ಸ್ ಡ್ರ್ಯಾಗನ್ ನೌಕೆ ಫ್ಲೋರಿಡಾದ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು.
ಕ್ರೂ-9 ಮಾರ್ಚ್ 18, 2025ರಂದು ಬೆಳಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹ್ಯಾಚ್ ಅನ್ನು ಮುಚ್ಚಿ ಅನ್‌ಡಾಕ್ ಮಾಡುವ ಮೂಲಕ ಭೂಮಿಯ ಕಡೆಗೆ ಪ್ರಯಾಣ ಪ್ರಾರಂಭಿಸಿತು. ಅದಾದ ನಂತರ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭೂಮಿಗೆ ಮರಳಲು ವಿಶೇಷ ವಿಧಾನ ಅಳವಡಿಸಿಕೊಂಡಿತು. ಇದರಿಂದಾಗಿ ನೌಕೆ ಭೂಮಿಯ ವಾತಾವರಣವನ್ನು ಸುರಕ್ಷಿತವಾಗಿ ಪ್ರವೇಶಿಸಿ, ಗೊತ್ತುಪಡಿಸಿದ ಸ್ಥಳದಲ್ಲಿಳಿಯಲು ಸಾಧ್ಯವಾಯಿತು.
ಸುನೀತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿಗಳ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಈಗ ಅವರು ಹ್ಯೂಸ್ಟನ್‌ನಲ್ಲಿರುವ ನಾಸಾದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಾಚರಣೆಗಳ ಪ್ರಧಾನ ಕಚೇರಿಯಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ.
ನಾಸಾ ಮತ್ತು ಸ್ಪೇಸ್‌ಎಕ್ಸ್ ಅಧಿಕಾರಿಗಳು ಜಂಟಿಯಾಗಿ ವಿಶೇಷ ಮಾಧ್ಯಮಗೋಷ್ಠಿ ಆಯೋಜಿಸಿದ್ದಾರೆ. ಈ ಮಾಧ್ಯಮಗೋಷ್ಠಿ ನಾಸಾದ ಉಚಿತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ NASA+ (ಹಿಂದೆ NASA TV ಎಂದು ಕರೆಯಲಾಗುತ್ತಿತ್ತು)ನಲ್ಲಿ ನೇರಪ್ರಸಾರವಿದೆ. ಆಸಕ್ತರು ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ನಾಸಾದ ಅಧಿಕೃತ ವೆಬ್‌ಸೈಟ್‌ನಲ್ಲಿ (plus.nasa.gov) ನೋಡಬಹುದು.
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್‌ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದರು. ಕೇವಲ ಒಂದು ವಾರದ ಮಟ್ಟಿಗೆ ಅಲ್ಲಿಗೆ ಪ್ರಯಾಣಿಸಿದ್ದರು. ಆದರೆ ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು.
ಸುನೀತಾ ತಮ್ಮ ವೃತ್ತಿಜೀವನದಲ್ಲಿ 9 ವಿಭಿನ್ನ ಬಾಹ್ಯಾಕಾಶ ನಡಿಗೆ (Space Walk) ಒಳಗೊಂಡಂತೆ 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಅನುಭವಿ ಗಗನಯಾತ್ರಿಯಾಗಿದ್ದ ಸುನೀತಾ ಅವರನ್ನು ಐಎಸ್‌ಎಸ್‌ನಲ್ಲಿ ಮೂರು ತಿಂಗಳು ಕಳೆದ ನಂತರ ನಿಲ್ದಾಣದ ಕಮಾಂಡರ್ ಆಗಿ ನೇಮಿಸಲಾಯಿತು. ಮತ್ತು ಈ ತಿಂಗಳ ಆರಂಭದವರೆಗೂ ಅವರು ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post