ನ್ಯೂಯಾರ್ಕ್: ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಚಿತ್ತ ಹರಿಸುತ್ತಿದ್ದಾರೆ. ಹೀಗಾಗಿ ಚಿನ್ನದ ದರ ನಿರಂತರ ಏರಿಕೆಯತ್ತ ಸಾಗುವಂತೆ ಮಾಡಿದೆ. ಅಮೂಲ್ಯವಾದ ಲೋಹ ಬಂಗಾರ ಇದೇ ಮೊದಲ ಬಾರಿಗೆ ಪ್ರತಿ ಔನ್ಸ್ ಗೆ 3,000 ಡಾಲರ್ ಆಗಿದೆ.
ಇನ್ನು ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದೂ ಕೂಡಾ ಭಾರೀ ಏರಿಕೆಯಾಗಿದೆ. ಗುರುವಾರ 10 ಗ್ರಾಂ ಚಿನ್ನದ ಬೆಲೆ ರೂ.89,550 ಇದ್ದರೆ, ಶುಕ್ರವಾರ ರೂ.920 ಏರಿಕೆಯಾಗಿ ರೂ.90,470 ಆಗಿತ್ತು. ಶನಿವಾರವಾದ ಇಂದು ಮತ್ತೆ 300 ರೂಗಳಷ್ಟು ಏರಿಕೆ ಕಂಡು 90724ಕ್ಕೆ ತಲುಪಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ಗುರುವಾರ ರೂ.1,01,29 ರಷ್ಟಿದ್ದರೆ, ಶುಕ್ರವಾರ ರೂ.1101 ಏರಿಕೆಯಾಗಿ ರೂ.1,02,400 ರಷ್ಟಿತ್ತು. ಇಂದು ಈ ಬೆಲೆ 102622ಗೆ ಮುಟ್ಟಿದ್ದು, 200 ರೂ ಹೆಚ್ಚಳವಾಗಿದೆ.
ಶುಕ್ರವಾರ ಸ್ಪಾಟ್ ಚಿನ್ನದ ದರವು ಪ್ರತಿ ಔನ್ಸ್‌ಗೆ ದಾಖಲೆಯ $3,004.86 ತಲುಪಿದೆ. ಈ ಮೂಲಕ 2025ರ ಆರಂಭದಿಂದ ಇಲ್ಲೀತನಕ ಹದಿಮೂರನೇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿ ಮುನ್ನುಗ್ಗುತ್ತಿದೆ. 2024 ರಲ್ಲಿ ಶೇ 27 ರಷ್ಟು ಏರಿಕೆ ಕಂಡಿದ್ದ ಬಂಗಾರ, 2025ನೇ ಇಸ್ವಿಯ ಆರಂಭಿಕ 2.5 ತಿಂಗಳಲ್ಲಿ ಶೇ 14 ಏರಿಕೆ ದಾಖಲಿಸಿದೆ.
ತಲೆಬಿಸಿ ತಂದಿಟ್ಟ ಟ್ರಂಪ್ ವ್ಯಾಪಾರ ನೀತಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಶುರುವಾದಾಗಿನಿಂದ ಅವರು ತೆಗೆದುಕೊಳ್ಳುತ್ತಿರುವ ಶುಂಕ ಹೇರಿಕೆ ನಿರ್ಧಾರಗಳಿಂದಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಯಾಗುತ್ತಿದ್ದು, ವ್ಯಾಪಾರ ಯುದ್ಧ ಆರಂಭವಾಗಿದೆ. ಚೀನಾ ಮತ್ತು ಕೆನಡಾದ ಮೇಲೆ ಸುಂಕ ಏರಿಕೆ, ಅವುಗಳಿಂದಲೂ ಪ್ರತೀಕಾರದ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತಿವೆ. ಹೀಗಾಗಿ ವಿಶ್ವ ಆರ್ಥಿಕ ನೀತಿಗಳಲ್ಲಿ ತ್ವರಿತ ಬದಲಾವಣೆಗಳಾಗುತ್ತಿವೆ. ಇದು ವಿಶ್ವ ಆರ್ಥಿಕ ನೀತಿ ಮೇಲೆ ಹೊಡೆತ ನೀಡಿದ್ದು ಹೂಡಿಕೆದಾರರು ಸುರಕ್ಷಿತ ಹೂಡಿಕೆ ಮಾರ್ಗವಾದ ಚಿನ್ನದತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.
COMEX-ಅನುಮೋದಿತ ಗೋದಾಮುಗಳಲ್ಲಿನ ಚಿನ್ನದ ದಾಸ್ತಾನುಗಳು ದಾಖಲೆಯ 40.56 ಮಿಲಿಯನ್ ಔನ್ಸ್‌ಗಳನ್ನು ಮುಟ್ಟಿವೆ. ಏಕೆಂದರೆ ವ್ಯಾಪಾರಿಗಳು ಸುಂಕದ ಅನಿಶ್ಚಿತತೆಯ ನಡುವೆ ತಮ್ಮ ಸುರಕ್ಷಿತತೆಯ ಕಡೆ ಗಮನ ಹರಿಸಿದ್ದರಿಂದ ಬಂಗಾರದತ್ತ ಲಕ್ಷ್ಯ ನೆಟ್ಟಿದ್ದಾರೆ.
ಹೊಸ ದಾಖಲೆಯ ಮೊತ್ತಕ್ಕೆ ಬಂಗಾರ ಏರುವ ಸಾಧ್ಯತೆ: ಸೆಂಟ್ರಲ್ ಬ್ಯಾಂಕ್ ಗಳಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ಆರ್ಥಿಕ ಅನಿಶ್ಚಿತತೆಯ ನಡುವೆ ರಾಷ್ಟ್ರಗಳು ಲೋಹವನ್ನು ಸಂಗ್ರಹಿಸುವುದನ್ನು ಮುಂದುವರಿಸುವುದರಿಂದ 2025 ರಲ್ಲಿ ಚಿನ್ನದ ಬೆಲೆಗಳು ಹೊಸ ಗರಿಷ್ಠಕ್ಕೆ ತೆಗೆದುಕೊಂಡು ಹೋಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.
ಇನ್ನು ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ 99.9 ಪ್ಯೂರಿಟಿಯ 10 ಗ್ರಾಂ ಬಂಗಾರಕ್ಕೆ 90724 ರೂಪಾಯಿ ಆಗಿದೆ. ಈ ಮೂಲಕ ಬಂಗಾರ ಇದೇ ಮೊದಲ ಬಾರಿಗೆ 90 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ 1ಲಕ್ಷ ರೂ ತಲುಪಿದರೂ ಅಚ್ಚರಿ ಪಡಬೇಕಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post