ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೇರರಿವಾಳನ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬುಧವಾರ ಬಿಡುಗಡೆ ಮಾಡಲಾಗಿದೆ. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂಕೋರ್ಟ್‌ಗೆ ನೀಡಲಾಗಿರುವ ಪರಮಾಧಿಕಾರವನ್ನು ಚಲಾ ಯಿಸಿ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯ ಪೀಠವು ಪೇರರಿವಾಳನ್ ಅವರನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ. ಸಂವಿಧಾನದ 161ನೇ ವಿಧಿಯಡಿ ಪೇರರಿವಾಳನ್ ದೋಷಮುಕ್ತಿಗೆ ತೀರ್ಮಾನ ಕೈಗೊಳ್ಳಲು ತಮಿಳುನಾಡು ರಾಜ್ಯಪಾಲರು ಬಹಳಷ್ಟು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಪೀಠವು 142ನೇ ವಿಧಿಯಡಿ ಅಧಿಕಾರ ಚಲಾ ಯಿಸಿ ಬಿಡುಗಡೆಗೆ ಆದೇಶಿಸಿದೆ. ಜಾಮೀನು ಪ್ರಕಟಿಸುವ ಸಮಯದಲ್ಲಿ ನ್ಯಾಯಪೀಠವು, ‘ಅಪರಾಧಿಯು 30 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಶಿಕ್ಷೆ ಅನುಭವಿಸಿದ್ದು, ಅವರ ನಡವಳಿಕೆಯು ತೃಪ್ತಿದಾಯಕವಾಗಿದೆ’ ಎಂದೂ ಹೇಳಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ 7 ಮಂದಿ ಅಪರಾಧಿಗಳಲ್ಲಿ ಪೇರರಿವಾಳನ್ ಒಬ್ಬರಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ‘ಪ್ರಕರಣದ ಎಲ್ಲ 7 ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವ ತಮಿಳುನಾಡು ರಾಜ್ಯ ಸಚಿವ ಸಂಪುಟದ ಸಲಹೆಯು ರಾಜ್ಯ ಪಾಲರಿಗೆ ಬದ್ಧವಾಗಿದೆ’ ಎಂದು ಹೇಳಿದ ನ್ಯಾಯಪೀಠವು, ‘ಐಪಿಸಿ ಸೆಕ್ಷನ್ 302ರ ಅಡಿಯಲ್ಲಿರುವ ಪ್ರಕರಣದಲ್ಲಿ ಕ್ಷಮಾದಾನ ನೀಡಲು ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ’ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿತು.
ಪೇರರಿವಾಳನ್ ಅವರ ತಾಯಿ ಅರ್ಪುತಮ್ಮ ಅಮ್ಮಾಳ್ ದಶಕಗಳ ಹೋರಾಟ :
ಚೆನ್ನೈ: ‘ನಾನು ಮುಗ್ಧ ಹುಡುಗನ ತಾಯಿ, 28 ವರ್ಷಗಳ ಹಿಂದೆ ನನ್ನ ಮಗನನ್ನು ನನ್ನಿಂದ ದೂರ ಮಾಡಲಾಗಿತ್ತು. ಆಗ ಅವನಿಗೆ ಕೇವಲ 19 ವರ್ಷ. ಆ ದಿನದಿಂದ ನಾನು ಅವನ ಹಿಂದೆ ಓಡಲು ಆರಂಭಿಸಿದೆ, ಈಗಲೂ ಓಡುತ್ತಿದ್ದೇನೆ’ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ ಪೇರರಿವಾಳನ್ ಅವರ ತಾಯಿ ಅರ್ಪುತಮ್ಮ ಅಮ್ಮಾಳ್ ಅವರು ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಬರೆದು
ಕೊಂಡಿದ್ದಾರೆ. ಮಗನ ಬಿಡುಗಡೆಗಾಗಿ ಅರ್ಪುತಮ್ಮ ಅಮ್ಮಾಲ್ ಅವರು 31 ವರ್ಷಗಳ ಕಾಲ ಪಟ್ಟುಬಿಡದೇ ಹೋರಾಟ ನಡೆಸಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಡಿ ಎ.ಜಿ ಪೇರರಿವಾಳನ್ ಅವರನ್ನು 1991ರ ಜೂನ್ 19ರಂದು ಬಂಧಿಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post