ಪುತ್ತೂರು : ಬ್ಯಾನರ್ ವಿಚಾರದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವವರ ಭೇಟಿಗೆ ವಿಜಯಪುರ ಶಾಸಕ ಆಗಮಿಸಿದ ವೇಳೆ ಬಿಜೆಪಿ ಮುಖಂಡರನ್ನು ಪುತ್ತಿಲ ಬೆಂಬಲಿಗರು ಆಸ್ಪತ್ರೆ ಕೊಠಡಿಯಿಂದ ಹೊರದಬ್ಬಿದ ಘಟನೆ ಶುಕ್ರವಾರ ನಡೆದಿರುವುದು ವರದಿಯಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದ ಗೌಡರ ಬಗ್ಗೆ ಅವಹೇಳನಕಾರಿ ಬ್ಯಾನರ್ ಅಳವಡಿಸಿದ ಆರೋಪದಲ್ಲಿ ಬಂಧನಕ್ಕೊಳಗಾದ ಸಂಘ ಪರಿವಾರದ ಕಾರ್ಯಕರ್ತರು ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದಾರೆ. ಈ ಪೈಕಿ ಆಸ್ಪತ್ರೆಗೆ ದಾಖಲಾಗಿರುವವರನ್ನು ಭೇಟಿಯಾಗಲು ಇಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಆಗಮಿಸಿದ್ದರು. ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಆಗಮಿಸಿದ ಯತ್ನಾಳ್ ಸಮ್ಮುಖವೇ ಬಿಜೆಪಿ ನಾಯಕರು ಹಾಗೂ ಸಂಘ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ನಡುವೆ ನೂಕಾಟ-ತಳ್ಳಾಟ ನಡೆದಿದೆ. ಇನ್ನು ಬಿಜೆಪಿಯ ಬಹುತೇಕ ಸ್ಥಳೀಯ ಮುಖಂಡರು ಆಸ್ಪತ್ರೆಗೆ ಬಂದಿದ್ದರೂ ದೂರವೇ ಉಳಿದಿದ್ದರು. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಕೊಠಡಿಯೊಳಗೆ ಕೇವಲ ಬಸನಗೌಡ ಪಾಟೀಲ್ ಅವರನ್ನು ಮಾತ್ರ ಬಿಟ್ಟ ಪುತ್ತಿಲ ಪರ ಬೆಂಬಲಿಗರು ಅವರ ಜೊತೆ ಆಗಮಿಸಿದ್ದ ಬಿಜೆಪಿ ಹಾಗೂ ಬಿಜೆಪಿ ಪರ ಇರುವ ಸಂಘ ಪರಿವಾರದ ಮುಖಂಡರನ್ನು ಬಾಗಿಲಿನಿಂದಲೇ ತಳ್ಳಿ ಹೊರದಬ್ಬಿದ್ದಾರೆ ಇದರ ವೀಡಿಯೋ ವೈರಲ್ ಆಗಿದೆ.
ಯುವಕರ ಆರೋಗ್ಯ ವಿಚಾರಿಸಿದ ಯತ್ನಾಳ್ ಬಳಿಕ ಮಾದ್ಯಮದ ಜೊತೆ ಮಾತನಾಡಿ ಪುತ್ತೂರಲ್ಲಿ ಹಿಂದು ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ದೌರ್ಜನ್ಯಕ್ಕೆ ಬಿಜೆಪಿ ನಾಯಕರೇ ಹೊಣೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅವರು ಶುಕ್ರವಾರ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನು ಭೇಟಿಯಾದರು. ಅವರ ಭೇಟಿಯ ವೇಳೆ ಬಿಜೆಪಿ ಮತ್ತು ಹಿಂದು ಸಂಘಟನೆ ಕಾರ್ಯಕರ್ತರ ನಡುವೆ ಸಣ್ಣ ಜಗಳವೂ ನಡೆದಿದೆ. ಇದುವರೆಗೆ ಭೇಟಿ ನೀಡಿದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಈ ಘಟನೆಯನ್ನು ಕಾಂಗ್ರೆಸ್ ತಲೆಗೆ ಕಟ್ಟಲು ಯತ್ನಿಸಿದ್ದರು. ಆದರೆ, ಮೊದಲ ಬಾರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದರ ಹಿಂದೆ ಬಿಜೆಪಿ ನಾಯಕರದೇ ಕೈವಾಡವಿದೆ ಎಂದು ಹೇಳಿದ್ದಾರೆ.
ಈಗ ಎನು ಘಟನೆ ಆಗಿದೆಯೋ ಅದನ್ನು ಮತ್ತೆ ಮತ್ತೆ ಕೆದಕುವುದಕ್ಕಿಂತ ನಾವು ಒಂದಾಗಬೇಕು. ಮುಂದೆ ಒಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಬರಲಿದ್ದು, ಆ ಬಗ್ಗೆ ಚಿಂತಿಸಿ ಮತ್ತೆ ಒಂದಾಗಿ ಪಕ್ಷ, ಸಂಘಟನೆ, ದೇಶ ಕಟ್ಟೋಣ ಎಂದರು. ಇದು ಬಿಜೆಪಿ ಮತ್ತು ಸಂಘಟನೆ ನಡುವಿನ ಸಣ್ಣ ಭಿನ್ನಮತ. ಇದನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲಾಗುವುದು ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post