ಬೆಳ್ತಂಗಡಿ: ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲಿನ ಕೋರೆಗೆ ಶನಿವಾರ ಸಂಜೆ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಬೆಳ್ತಂಗಡಿ ಪೊಲೀಸರ ತಂಡ ಜಂಟಿ ಕಾರ್ಯಾಚರಣೆಯಲ್ಲಿ ದಾಳಿ ನಡೆಸಿದ್ದು ಸ್ಪೋಟಕಗಳು ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಂಡದ್ದಲ್ಲದೆ ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.
ಈ ಕಲ್ಲಿನಕೋರೆ ಯಾವುದೇ ಸಮರ್ಪಕವಾದ ದಾಖಲೆಗಳಿಲ್ಲದೆ ನಡೆಯುತ್ತಿತ್ತು. ಈ ಕಲ್ಲಿನ ಕೋರೆಯನ್ನು ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಎಂಬವರು ನಡೆಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಒಂದು ಹಿಟಾಚಿ, ಒಂದು ಕಂಪ್ರೆಸರ್ ಮೆಷಿನ್, ಒಂದು ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕಲ್ಲಿನ ಕೋರೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿರುವ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತ್ರಿಯ ವೇಳೆ ಪೊಲೀಸರು ಬಂಧಿಸಿದ್ದಾರೆ. ಯುವ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕರ ಆಪ್ತನ ಬಂಧನದ ಬಗ್ಗೆ ಮಾಹಿತಿ ತಿಳಿದು ತಡ ರಾತ್ರಿಯ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜಾರು ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಪೊಲೀಸರು ಬಿಡುಗಡೆ ಮಾಡದಿದ್ದಾಗ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ನನ್ನದು ಸರಕಾರ ಬರುತ್ತದೆ ನೋಡ್ಕೋತ್ತಿನಿ ಎಂದು ಪೊಲೀಸ್ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
Discover more from Coastal Times Kannada
Subscribe to get the latest posts sent to your email.
Discussion about this post