ಮಂಗಳೂರು, ಆಗಸ್ಟ್ 18: ಮುಡಿಪು ಸಮೀಪದ ಮುದುಂಗಾರು ಕಟ್ಟೆ ಬಳಿ ಮಹಿಳೆಯೊಬ್ಬರ ಬಂಗಾರದ ಸರ ಕಸಿದು ಪರಾರಿಯಾಗಿದ್ದ ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನವಾಝ್ ಯಾನೆ ನವ್ವ(32) ಹಾಗೂ ನಿಯಾಫ್ ಯಾನೆ ನಿಯಾ(28) ಎಂದು ಗುರುತಿಸಲಾಗಿದೆ.
ಮುದುಂಗಾರು ಕಟ್ಟೆ ಕಲ್ಲಾಪು ನಿವಾಸಿ ಯಮುನಾ ಎಂಬ ವೃದ್ಧ ಮಹಿಳೆ ಮೊನ್ನೆ ಶುಕ್ರವಾರ ಮುದುಂಗಾರು ಕಟ್ಟೆ ಶಾಲಾ ಹಿಂಭಾಗದಲ್ಲಿ ಸೊಪ್ಪು ಕೊಯ್ಯುತ್ತಿದ್ದಾಗ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಆಗಂತುಕರು ಮಹಿಳೆಯ ಸುಮಾರು ಒಂದುವರೆ ಪವನ್ ತೂಕದ ಬಂಗಾರದ ಸರ ಕಸಿದು ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಮಹಿಳೆ ಬೊಬ್ಬೆ ಹಾಕಿದ್ದರೂ ಸ್ಥಳದಲ್ಲಿ ಯಾರೂ ಇರಲಿಲ್ಲ. ಬಳಿಕ ಮಹಿಳೆಯ ಮನೆಯವರು ಕೊಣಾಜೆ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಸಿಸಿ ಟಿವಿಗಳ ಪರಿಶೀಲನೆ ವೇಳೆ ಕಳ್ಳರ ಸುಳಿವು ಸಿಕ್ಕಿತ್ತು.
ಕಳ್ಳತನ ನಡೆದ ಎರಡನೇ ದಿನದಲ್ಲಿ ಕೊಣಾಜೆ ಪೊಲೀಸರಾದ ಪಿಎಸ್ ಐ ವಿನೋದ್, ಸಿಬ್ಬಂದಿಗಳಾದ ಸಂತೋಷ್ ಕೆಸಿ, ಬಸವಣ ಗೌಡ ಹಾಗೂ ಸುರೇಶ್ ರವರು ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ರವಿವಾರ ಕೈರಂಗಳ ಗ್ರಾಮದ ವಿದ್ಯಾನಗರ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ. ಆರೋಪಿಗಳಿಂದ ಹತ್ತು ಗ್ರಾಂ ಬಂಗಾರ ಹಾಗೂ ಸ್ಕೂಟರನ್ನು ವಶಪಡಿಸಿಕೊಂಡಿಸಿದ್ದಾರೆ. ಆರೋಪಿಗಳಲ್ಲಿ ನವಾಝ್ ಎಂಬಾತನ ವಿರುದ್ಧ ಕೊಣಾಜೆ ಠಾಣೆಯಲ್ಲಿ ಈ ಹಿಂದೆಯೇ ದರೋಡೆ ಹಾಗೂ ಗಲಾಟೆ ಪ್ರಕರಣಗಳು ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post