ಮಂಗಳೂರು, ಫೆ.19: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಶ್ರೀರಾಮನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೋ ಮಾಡಿದ ಪೋಷಕಿಗೆ ಇವರೇ ಎಂದು ಮಹಿಳೆಯ ಕುಟುಂಬ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ನಂತರ ವಿದೇಶದಿಂದ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜೆರೋಸಾ ಶಾಲೆಯ ಶಿಕ್ಷಕಿ ಧರ್ಮ ಅವಹೇಳನ ಪ್ರಕರಣ ಸಂಬಂಧ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ್ದು ಇವರೇ ಎಂದು ಹೇಳಿ ಮಂಗಳೂರಿನ ಗರೋಡಿ ನಿವಾಸಿ ಕವಿತಾ ಅವರ ಕುಟುಂಬದ ಫೋಟೋದ ಜೊತೆಗೆ ಕವಿತಾರ ನಂಬರ್ ಕೂಡ ವೈರಲ್ ಮಾಡಿದ್ದಾರೆ. ಇದರ ಜೊತೆಗೆ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಗೆ ಕವಿತಾ ಅವರು ದೂರು ನೀಡಿದ್ದಾರೆ. ಕವಿತಾ ಅವರ ಮಗಳು ಜೆರೋಸಾ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಸಿಸ್ಟರ್ ಪ್ರಭಾ ವಿರುದ್ಧ ಪೋಷಕರ ಪ್ರತಿಭಟನೆಯಲ್ಲೂ ಭಾಗವಹಿಸಿದ್ದಳು. ಈ ನಡುವೆ, ಜೆರೋಸಾ ಶಿಕ್ಷಕಿ ಆಡಿಯೋ ವೈರಲ್ ಮಾಡಿದ್ದು ಕವಿತಾ ಅಂತ ಆರೋಪಿಸಿ ಬೆದರಿಕೆ ಹಾಕಲಾಗುತ್ತಿದೆ. ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಅವಾಚ್ಯವಾಗಿ ನಿಂದಿಸಿ ವಾಟ್ಸ್ಆ್ಯಪ್ಗೆ ಅಶ್ಲೀಲವಾದ ಆಡಿಯೋ ಸಂದೇಶ ಕಳುಹಿಸಲಾಗುತ್ತಿದೆ. ಕೆಲವು ವಾಟ್ಸ್ಆ್ಯಪ್ ಗ್ರೂಪ್ಗೆ ಕವಿತಾ ಅವರ ನಂಬರ್ ಸೇರಿಸಿ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆಡಿಯೋ ವೈರಲ್ ಮಾಡುತ್ತೀಯಾ ಅಂತ ನಿರಂತರ ಬೆದರಿಕೆ ಕರೆ ಮಾಡಲಾಗಿದೆ. ಆದರೆ ವೈರಲ್ ಆಗಿರುವ ಆಡಿಯೋ ತನ್ನದಲ್ಲದಿದ್ದರೂ ನಿರಂತರ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಕವಿತಾ ಅವರು ಬೆದರಿಕೆ ಆಡಿಯೋ, ವಾಟ್ಸ್ಆ್ಯಪ್ ಸ್ಕ್ರೀನ್ ಶಾಟ್ಗಳ ಸಹಿತ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಕವಿತಾ, ಫೆ.15 ರಿಂದ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಈ ಎಲ್ಲಾ ಘಟನೆಗಳಿಗೆ ನಾನು ಕಾರಣ ಎಂಬ ರೀತಿಯಲ್ಲಿ ಸಂದೇಶವೊಂದನ್ನು ಸೃಷ್ಟಿ ಮಾಡಲಾಗಿದೆ. ಫೇಸ್ ಬುಕ್ ಖಾತೆಯಿಂದ ನನ್ನ ಪೋಟೋ ಬಳಸಿ ವೈರಲ್ ಮಾಡಿದ್ದಾರೆ.ರಾತ್ರಿ ಹೊತ್ತು ಹೊರದೇಶದಿಂದ ಅನಾಮಿಕ ಕರೆಗಳು ಬರಲು ಆರಂಭವಾಗಿದೆ. ನನಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಡಿಯೋದಲ್ಲಿ ನನ್ನ ಅಪ್ಪ ಅಮ್ಮನ ಬಗ್ಗೆ ಕೆಟ್ಟದಾಗಿ ಬೈಯಲಾಗಿದೆ. ಅತ್ಯಂತ ಕೆಟ್ಟ ಪದಗಳಲ್ಲಿ ಏನೆಲ್ಲಾ ಬೈದಿದ್ದಾರೆ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ತನಿಖೆ ಮಾಡುತ್ತೇವೆಂದು ಪೊಲೀಸರು ಹೇಳಿದ್ದಾರೆ. ಎಲ್ಲಾ ದಾಖಲೆಗಳನ್ನು ಸಹ ಪೊಲೀಸರಿಗೆ ನೀಡಿದ್ದೇನೆ. ನಾನು ಮೊನ್ನೆ ಮಾಧ್ಯಮಗಳ ಮುಂದೆ ಮಾತನಾಡಿದಕ್ಕೆ ಟಾರ್ಗೆಟ್ ಮಾಡಿದ್ದಾರೆ. ಸಿಸ್ಟರ್ ಪ್ರಭಾ ಆ ರೀತಿ ಪಾಠ ಮಾಡಬಾರದಿತ್ತು. ವರ್ಕ್ ಆ್ಯಂಡ್ ವರ್‌ಶಿಪ್ ಪಾಠಕ್ಕೆ ಪೂರಕವಾಗಿ ಬೇರೆ ಏನಾದರೂ ಹೇಳಬಹುದು. ಆದರೆ ರಾಮನ ಬಗ್ಗೆ, ಗೋದ್ರಾ ಘಟನೆ ಬಗ್ಗೆ ವಿವರಿಸುವ ಅಗತ್ಯವಿರಲಿಲ್ಲ ಎಂದರು.
ನಾನು ಸಹ 15 ವರ್ಷದಿಂದ ಶಿಕ್ಷಕಿಯಾಗಿದ್ದೇನೆ. ಶಾಲೆ ಅಂತಾ ಬಂದ ಮೇಲೆ ಎಲ್ಲಾ ಮಕ್ಕಳು ನಮ್ಮವರು. ಎಲ್ಲರನ್ನು ನಮ್ಮ ಮಕ್ಕಳೆಂದು ನೋಡುವಾಗ ನಿರ್ದಿಷ್ಟವಾಗಿ ರಾಮನ ಬಗ್ಗೆ, ಧರ್ಮದ ಬಗ್ಗೆ ನಿಂಧಿಸುವ ಅಗತ್ಯವಿಲ್ಲ. ಆ ಒಂದು ಕಾರಣದಿಂದ ನನಗೆ ಹಲವು ಕರೆಗಳು ಬರುತ್ತಿದೆ. ಘಟನೆ ಬಗ್ಗೆ ತನಿಖೆಗೆ ಸರ್ಕಾರದಿಂದ ನೇಮಿಸಿದ ತನಿಖಾಧಿಕಾರಿ ನನ್ನನ್ನು ಸಂಪರ್ಕಿಸಿಲ್ಲ. ಸಂಪರ್ಕ ಮಾಡಿದರೆ ಇದೆಲ್ಲಾ ವಿಚಾರವನ್ನು ಹೇಳಲು ತಯಾರಿದ್ದೇನೆ. ಶನಿವಾರ ಏಳನೇ ತರಗತಿ ಮಕ್ಕಳು ಹಾಗೂ ಪೋಷಕರನ್ನು ಕರೆದಿದ್ದಾರೆ. ಆದ ಘಟನೆ ಬಗ್ಗೆ ಹೇಳಿಕೆ ಬರೆಸಿಕೊಂಡಿದ್ದಾರೆ. ರಾಮನ ಮೇಲೆ ಭಾರ ಹಾಕಿದ್ದೇನೆ. ಅವನೇ ಸರಿಯಾದ ರೀತಿಯಲ್ಲಿ ತನಿಖೆ ಆಗುವಂತೆ ಮಾಡಬೇಕು ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post