ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೋರ್ವರ ಬಗ್ಗೆ ಕೀಳು ಮಟ್ಟದ ಭಾಷೆ, ಮಾನಹಾನಿಕರವಾಗಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಗಳನ್ನು ಅಂಟಿಸಿ ಕಿರುಕುಳ ನೀಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ನಿವಾಸಿ, ಪ್ರಕಾಶ್ ಶೆಣೈ (44), ಬಂಟ್ವಾಳದ ಸಿದ್ದಕಟ್ಟೆ, ಮೇಗಿನ ಉಳಿರೋಡಿ ನಿವಾಸಿ, ಪ್ರದೀಪ್ ಪೂಜಾರಿ (36), ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಸೀತಾನದಿ ನಡ್ಪಾಲು ನಿವಾಸಿ ತಾರಾನಾಥ ಬಿ ಎಸ್ ಶೆಟ್ಟಿ, (32) ಬಂಧಿತ ಆರೋಪಿಗಳು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪ್ರತಿಷ್ಠಿತ ಕಾಲೇಜ್ ವೊಂದರ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ನಡುವಿನ ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರದ ಗಲಾಟೆಯಲ್ಲಿ ಕಾಲೇಜಿನ ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರವಾದ ಪತ್ರವನ್ನು, ಪೋಸ್ಟರ್ ಗಳನ್ನು ತಯಾರಿಸಿ ಅಂಚೆ ಮೂಲಕ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿ ಮಾನಹಾನಿ, ಜೀವ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಧ್ಯಾಪಕಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕಾಲೇಜಿನ ಸಂಚಾಲಕ ಹಾಗೂ ಪ್ರಾಧ್ಯಾಪಕರಾಗಿದ್ದು, ಅವರು ಜೊತೆಗೂಡಿ ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರವಾದ ಬರಹವನ್ನು ಪ್ರಾರಂಭದಲ್ಲಿ ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಪ್ರಾಧ್ಯಾಪಕಿಯ ಭಾವಚಿತ್ರದೊಂದಿಗೆ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದರು. ಇದಾದ ನಂತರ ಪ್ರಾಧ್ಯಾಪಕಿಯ ಮೊಬೈಲ್ ನಂಬ್ರ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ತಯಾರಿಸಿ ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್ ಆರ್ ಪುರ, ಶಿವಮೊಗ್ಗ ಮುಂತಾದ ಬಸ್ ಸ್ಟಾಂಡ್ ಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದು, ಇದನ್ನು ನೋಡಿದ ಸಾರ್ವಜನಿಕರು ಪ್ರಾಧ್ಯಾಪಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾನಹಾನಿಕರವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ ಎಂಬಾತನ ವಿರುದ್ಧ ಈ ಹಿಂದೆ 2019ನೇ ಇಸವಿಯಲ್ಲಿ ಕಾಲೇಜ್ ಪ್ರಾಧ್ಯಾಪಕಿಯೊಬ್ಬರ ಮಾನಹಾನಿಗೆ ಯತ್ನಿಸಿದ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿಗಳಿಂದ 3 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ. ಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಸೆನ್ ಇನ್ಸ್ ಪೆಕ್ಟರ್ ಸತೀಶ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post