ಮಂಗಳೂರು, ಜುಲೈ 20: ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಶೇಕ್ ಲತೀಫ್ ನೇಮಕಗೊಂಡಿದ್ದು ಅಧಿಕಾರ ಸ್ವೀಕರಿಸಿದ್ದಾರೆ.
ಕೆಎಎಸ್ ಅಧಿಕಾರಿಯಾಗಿರುವ ಶೇಕ್ ಲತೀಫ್ ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹಣಕಾಸು ಸದಸ್ಯರಾಗಿದ್ದರು. ಮೊದಲಿಗೆ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ವಿಭಾಗದ ಸಹಾಯಕ ನಿಯಂತ್ರಣ ಅಧಿಕಾರಿಯಾಗಿದ್ದ ಶೇಕ್ ಲತೀಫ್ ಬಳಿಕ ಪದವಿಪೂರ್ವ ಶಿಕ್ಷಣ ಇಲಾಖಾ ಲೆಕ್ಕಾಧಿಕಾರಿಯಾಗಿ, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯಾಗಿ, ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯ ನಿರ್ವಹಣಾಧಿಕಾರಿಯಾಗಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ, ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಆರ್ಥಿಕ ಸಲಹೆಗಾರರಾಗಿ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿ (ಆರ್ಥಿಕ) ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಬೆಳ್ತಂಗಡಿ ತಾಲೂಕಿನ ಉಜಿರೆಯ ಓಡಲ ನಿವಾಸಿ ಶೇಕ್ ಪಕೀರ್ ಸಾಹೇಬ್ ಹಾಗೂ ರಶೀದಾಬಿ ದಂಪತಿ ಪುತ್ರನಾಗಿರುವ ಶೇಖ್ ಲತೀಫ್ ಉಜಿರೆಯ ದೊಂಪದಪಲ್ಕೆ ಓಡಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದಿದ್ದರು. ಹತ್ತನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದಿದ್ದರು. ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯಲ್ಲಿ (ಎಸ್.ಡಿ.ಎಂ.) ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ತೇರ್ಗಡೆಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post