ಮಂಗಳೂರು: ಲಿಂಗಾಯತ ಎಂದರೆ ಜಾತಿ ಅಲ್ಲ, ಇದು ಪರಿಪೂರ್ಣ ಧರ್ಮ. ಜಾತಿ ಬೇರೆ ಧರ್ಮ ಬೇರೆ, ಜಾತಿ ಹುಟ್ಟಿನಿಂದ ಬರುವುದಾಗಿದ್ದು, ಧರ್ಮ ಸಂಸ್ಕಾರದಿಂದ ಬರುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗಪಟ್ಟದೇವರು ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಸಹಮತ ವೇದಿಕೆಯು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಮಂಗಳೂರಿನ ತುಳು ಭವನದಲ್ಲಿ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನದ ಭಾಗವಾಗಿ ನಡೆದ ವಿದ್ಯಾರ್ಥಿಗಳ ಜೊತೆಗಿನ ವಚನ ಸಂವಾದದಲ್ಲಿ ಅವರು ಮಾತನಾಡಿದರು.
ಬಸವಣ್ಣ ಸರ್ವಧರ್ಮ ಸಮನ್ವಯ ಬೋಧಿಸಿದವರು, ಮತ್ತೆ ಲಿಂಗಾಯತ ಧರ್ಮ ಅಂತ ಯಾಕೆ ಬೇಕಿತ್ತು ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಈ ಮೇಲಿನ ಪ್ರತಿಕ್ರಿಯೆ ನೀಡಿದ ಅವರು, ಜಾತಿ ಕತ್ತಲೆಯಂತೆ, ಧರ್ಮ ಜ್ಯೋತಿಯಂತೆ ಎಂದರು.
ಜಾತ್ಯತೀತ ಸಮಾಜ ನಿರ್ಮಾಣ ಆಗಬೇಕು ಎನ್ನುವಾಗ ಜಾತಿ ಸಮೀಕ್ಷೆ ಯಾಕೆ ಬೇಕು ಎಂದು ವಿದ್ಯಾರ್ಥಿನಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹುಲಸೂರು ಮಠದ ಶಿವಾನಂದ ಸ್ವಾಮೀಜಿ, ಕೆಲವರ ಉಳಿವಿಗಾಗಿ ಜಾತಿ ವ್ಯವಸ್ಥೆ ಇಂದಿಗೂ ಉಳಿದಿದೆ. ಯುವ ಮನಸ್ಸುಗಳು ಸಿದ್ಧವಾದರೆ, ಭವಿಷ್ಯದ ಭಾರತವನ್ನು ಜಾತ್ಯತೀತ ಮಾಡಲು ಸಾಧ್ಯ ವಿದೆ. ಇಂತಹ ಪ್ರಶ್ನೆಗಳು ಸಂಸತ್‌ನಲ್ಲಿ, ವಿಧಾನ ಸೌಧದಲ್ಲಿ ಚರ್ಚೆಯಾಗಬೇಕು ಎಂದು ಹೇಳಿದರು.
10ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ವಚನ ಸಂವಾದದಲ್ಲಿ ಭಾಗವಹಿಸಿದ್ದರು. ಪ್ರೊ. ಮೀನಾಕ್ಷಿ ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
ನವಿಲುಗುಂದ ಮಠದ ಬಸವಲಿಂಗ ಸ್ವಾಮೀಜಿ, ಹಂದಿಗುಂದದ ಶಿವಾನಂದ ಸ್ವಾಮೀಜಿ, ಬೆಳಗಾವಿಯ ಶಿವಬಸವ ದೇವರು, ಕಲಬುರಗಿಯ ವೀರಸಿದ್ಧ ದೇವರು, ಮಮ್ಮಿಗಟ್ಟಿಯ ಬಸವಾನಂದ ದೇವರು, ರಾಯಚೂರಿನ ವೀರಭದ್ರ ಸ್ವಾಮೀಜಿ, ಬಸವಕಲ್ಯಾಣದ ಬಸವರಾಜ ದೇವರು, ಗಡಿಂಗ್ಲೇಸದ ಮಹಂತ ಸಿದ್ದೇಶ್ವರ ಸ್ವಾಮೀಜಿ, ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಉಪಸ್ಥಿತರಿದ್ದರು.
ಬೆಳಗಾವಿ ಸೇಗುಣಸಿಯ ಮಹಾಂತ ಪ್ರಭು ಸ್ವಾಮೀಜಿ ದಿಕ್ಸೂಚಿ ಮಾತನಾಡಿ, ಸಂವಾದ ನಿರ್ವಹಿಸಿದರು. ಸಹಮತ ವೇದಿಕೆ ಅಧ್ಯಕ್ಷ ಪ್ರೊ. ಕೆ.ಎಸ್.ಜಯಪ್ಪ ಸ್ವಾಗತಿಸಿದರು. ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾ ಸಂಚಾಲಕ ಉಮರ್ ಯು.ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಇಸ್ಲಾಂ ಧರ್ಮಕ್ಕೆ ಮುಹಮ್ಮದ್ ಪೈಗಂಬರ್ ಗುರು, ಕುರಾನ್ ಧರ್ಮ ಗ್ರಂಥ. ಕ್ರೈಸತರಿಗೆ ಯೇಸುಕ್ರಿಸ್ತ ಧರ್ಮಗುರು ಬೈಬಲ್ ಧರ್ಮಗ್ರಂಥ. ಹಾಗೆಯೇ ಲಿಂಗಾಯತರಿಗೆ ಬಸವಣ್ಣ ಧರ್ಮಗುರುಗಳಾದರೆ ವಚನ ಸಾಹಿತ್ಯವೇ ಧರ್ಮ ಗ್ರಂಥ. ಇವೆರಡರ ಪ್ರಕಾರ ನಡೆದುಕೊಳ್ಳುವವರು ಲಿಂಗಾಯತರು’ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಅಭಿಪ್ರಾಯಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post