ಬೆಂಗಳೂರು: ಕಾರಿನಲ್ಲಿ ಚಾಲಕರ ಜತೆ ಪ್ರಯಾಣಿಸುವ ಸಹ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಗುರುವಾರದಿಂದ (ಅಕ್ಟೋಬರ್ 20) ಜಾರಿಗೆ ಬಂದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೂಚನೆಯಂತೆ ಹೊಸ ನಿಯಮ ಜಾರಿಗೆ ತಂದಿರುವ ಪೊಲೀಸ್ ಇಲಾಖೆಯು, ನಿಯಮ ಉಲ್ಲಂಘನೆಗೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು 500 ರೂ. ನಿಂದ 1 ಸಾವಿರ ರೂ.ಗೆ ಹೆಚ್ಚಿಸಿದೆ. ಬಾಡಿಗೆ ಅಥವಾ ಖಾಸಗಿ ಕಾರುಗಳಲ್ಲಿ ಚಾಲಕನ ಜತೆಗೆ ಸಹ ಪ್ರಯಾಣಿಕರೂ ಗುರುವಾರದಿಂದ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕಿದೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಆಯುಕ್ತ ಆರ್. ಹಿತೇಂದ್ರ ಆದೇಶದಲ್ಲಿ ಸೂಚಿಸಿದ್ದಾರೆ.
‘ಕಾರು ಅಪಘಾತಗಳಲ್ಲಿ ಸಾವು ನೋವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ. ಪ್ರಯಾಣಿಕರ ಸಂಖ್ಯೆ 8ಕ್ಕಿಂತ ಕಡಿಮೆ ಇರುವ ವಾಹನಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. 2019ರ ಮೋಟಾರು ವಾಹನ ಕಾಯಿದೆ ಪ್ರಕಾರ, ಸೆಕ್ಷನ್ 194ರಡಿ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post